ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯಲ್ಲಿ ಇದೇ ಪ್ರಪ್ರಥಮ ಬಾರಿಗೆ ಆಯೋಜಿಸಿದ್ದ 9 ಅಗ್ನಿ ಕುಂಡಗಳ ಅತಿರುದ್ರ ಮಹಾಯಜ್ಞ ಹಾಗೂ 11,111 ಮುತ್ತೇದೆಯರಿಂದ ಪ್ರಾರಂಭವಾದ ಕಿರಿಯ ಕುಂಭಮೇಳದ ಸಮಾರೋಪ ಸಮಾರಂಭ, ಧರ್ಮಸಭೆ ಮತ್ತು ಸನ್ಮಾನ ಕಾರ್ಯಕ್ರಮವು ನ. 18ರಂದು ಸಂಜೆ 4 ಗಂಟೆಗೆ ನಡೆಯಲಿದೆ ಎಂದು ಅತಿರುದ್ರ ಮಹಾಯಾಗ ಸೇವಾ ಸಮಿತಿ ಗೌರವಾಧ್ಯಕ್ಷ, ನರಗುಂದ ಶಾಸಕ ಸಿ.ಸಿ. ಪಾಟೀಲ ತಿಳಿಸಿದರು.
ಸೋಮವಾರ ನಗರದ ವಿದ್ಯಾದಾನ ಸಮಿತಿ ಮೈದಾನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಉತ್ತರ ಕರ್ನಾಟಕದಲ್ಲಿಯೇ ಪ್ರಥಮ ಬಾರಿಗೆ ಜರುಗಿದ ಈ ಅತಿರುದ್ರ ಮಹಾಯಜ್ಞ ಹಾಗೂ ಕಿರಿಯ ಕುಂಭಮೇಳ ಯಶಸ್ವಿಯಾಗಿ ನಡೆಯುತ್ತಿರುವುದು ಸಂತಸದ ವಿಷಯ. ಶ್ರೀ ಸಹದೇವಾನಂದ ಗಿರಿ ಜೀ ಮಹಾರಾಜರ ನೇತೃತ್ವದಲ್ಲಿ ನಡೆದ ಈ ಕಿರಿಯ ಕುಂಭಮೇಳದಲ್ಲಿ ಭಾಗಿಯಾದ ನಾವೆಲ್ಲರೂ ಪುಣ್ಯವಂತರು. ಈ ಮಹಾಯಾಗ ಜಾತ್ಯಾತೀತ, ಪಕ್ಷಾತೀತವಾಗಿ ನಡೆದಿದೆ ಎಂದು ಹೇಳಿದರು.
ನವೆಂಬರ್ 11ರಂದು ಆರಂಭವಾದ ಕಿರಿಯ ಕುಂಭಮೇಳದಲ್ಲಿ ಯಜ್ಞಾರ್ಥಿಗಳಿಗೆ ದಶವಿಧಿ ಗತಿ ಸ್ನಾನ ಮತ್ತು ಸಂಕಲ್ಪದೊಂದಿಗೆ ಲೋಕ ಕಲ್ಯಾಣಾರ್ಥವಾಗಿ 9 ಅಗ್ನಿ ಕುಂಡಗಳಲ್ಲಿ ಪ್ರತಿದಿನ ಮಹಾಯಜ್ಞ ನಡೆಯುತ್ತಿದೆ. ಸಾವಿರಾರು ಭಕ್ತರು ಯಜ್ಞದ ದರ್ಶನ ಪಡೆದು, ನಾಗಸಾಧುಗಳಿಂದ ಉಚಿತ ರುದ್ರಾಕ್ಷಿ ಪಡೆದಿದ್ದಾರೆ. ಈವರೆಗೆ 4 ಲಕ್ಷಕ್ಕೂ ಅಧಿಕ ರುದ್ರಾಕ್ಷಿ ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು.
ಪೂಜ್ಯ ಶ್ರೀ ಸಹದೇವಾನಂದ ಗಿರಿ ಜೀ ಮಹಾರಾಜರು ಮಾತನಾಡಿ, ಗದಗ ಜಿಲ್ಲೆಯ ಜನರ ಶ್ರದ್ಧೆ ಮತ್ತು ಭಕ್ತಿ ಅಗಾಧವಾಗಿದೆ. ಪ್ರತಿನಿತ್ಯ ಯಜ್ಞದ ದರ್ಶನಕ್ಕೆ ಸಾವಿರಾರು ಜನರು ಆಗಮಿಸಿರುವುದು ಖುಷಿ ತಂದಿದೆ ಎಂದರು.
ಈ ಸಂದರ್ಭದಲ್ಲಿ ಅತಿರುದ್ರ ಮಹಾಯಾಗದ ಸೇವಾ ಸಮಿತಿಯ ಪ್ರಮುಖರಾದ ಕಿರಣ ಭೂಮಾ, ಎಚ್.ಎಸ್. ಶಿವನಗೌಡ್ರ, ರಾಜು ಕುರುಡಗಿ, ಬಸವರಾಜ ಬಿಂಗಿ, ರಾಜಣ್ಣ ಕುರಿ, ರವಿ ಗುಂಜಿಕರ, ರಮೇಶ ಸಜ್ಜಗಾರ ಮುಂತಾದವರು ಉಪಸ್ಥಿತರಿದ್ದರು.
ಮಹಾಯಜ್ಞ ಕಾರ್ಯದಲ್ಲಿ ಕಾಶಿ ಪೀಠದ ಶ್ರೀ ಚಂದ್ರಶೇಖರ ಶಿವಾಚಾರ್ಯರು, ಸೂಡಿ ಮಠದ ಶ್ರೀಗಳು, ಕಾಗಿನೆಲೆ ಪೀಠದ ಅಮೋಘ ಸಿದ್ಧಾನಂದಪುರಿ ಶ್ರೀಗಳು, ಮಹಂತಾ ಕಾಂಚನ ಶ್ರೀಗಳು ಸೇರಿದಂತೆ ವಿವಿಧ ಮಠಾಧೀಶರು ಆಗಮಿಸಿ ದರ್ಶನ ಪಡೆದಿರುವುದು ಈ ಕಾರ್ಯಕ್ರಮದ ವಿಶೇಷವಾಗಿದೆ. ಕಿರಿಯ ಕುಂಭಮೇಳದ ಸಮಾರೋಪ ಧರ್ಮಸಭೆ ಮತ್ತು ಮಹಾಯಜ್ಞದ ಕಾರ್ಯಕ್ಕೆ ದೇಣಿಗೆ ನೀಡಿದವರಿಗೆ ಸನ್ಮಾನ ಕಾರ್ಯಕ್ರಮವನ್ನು ಸಹದೇವಾನಂದ ಗಿರಿ ಜೀ ಮಹಾರಾಜರ ನೇತೃತ್ವದಲ್ಲಿ ನವೆಂಬರ್ 18ರಂದು ಸಾಯಂಕಾಲ 4 ಗಂಟೆಗೆ ವಿದ್ಯಾದಾನ ಸಮಿತಿ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ.
ಸಿ.ಸಿ. ಪಾಟೀಲ.
ಮಹಾಯಾಗ ಸೇವಾ ಸಮಿತಿ ಗೌರವಾಧ್ಯಕ್ಷರು.



