ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯ ಯುವಜನರನ್ನು ನಾಯಕತ್ವ, ಕ್ರೀಡೆ, ಕೌಶಲ್ಯಾಭಿವೃದ್ಧಿ ಹಾಗೂ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಉದ್ದೇಶದಿಂದ ಪ್ರತಿ 4 ಸಾವಿರ ಜನಸಂಖ್ಯೆಗೆ ಒಂದರಂತೆ ‘ಭಾರತ್ ಜೋಡೋ ಯುವ ಸಂಘ’ಗಳನ್ನು ರಚಿಸಲು ಜಿಲ್ಲಾಡಳಿತ ಮುಂದಾಗಿದೆ. ಸಂಘಗಳ ನೋಂದಣಿ ಪ್ರಕ್ರಿಯೆಯನ್ನು ಜುಲೈ 31ರೊಳಗೆ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಭಾರತ್ ಜೋಡೋ ಯುವ ಸಂಘಗಳ ಸ್ಥಾಪನೆ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲಾಧಿಕಾರಿಗಳು ಮಾತನಾಡಿ, 16ರಿಂದ 35 ವರ್ಷದೊಳಗಿನ ಯುವಕ-ಯುವತಿಯರು ಸಂಘದ ಸದಸ್ಯರಾಗಲು ಅರ್ಹರಾಗಿದ್ದು, ಪ್ರತಿ ಸಂಘದಲ್ಲಿ 15 ಸದಸ್ಯರ ಕಾರ್ಯಕಾರಿ ಸಮಿತಿ ರಚಿಸಲಾಗುವುದು. ಸಮಿತಿ ಸದಸ್ಯರನ್ನು ಲಾಟರಿ ಪದ್ಧತಿಯ ಮೂಲಕ ಆಯ್ಕೆ ಮಾಡಲಾಗುತ್ತದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು ಹಾಗೂ ಸಾಮಾನ್ಯ ವರ್ಗಗಳಿಗೆ ಮೀಸಲಾತಿ ಕಲ್ಪಿಸಲಾಗಿದ್ದು, ಕಾರ್ಯಕಾರಿ ಸಮಿತಿಯಲ್ಲಿ ಯಾವುದೇ ಸದಸ್ಯರಿಗೆ ಸತತ ಎರಡು ಅವಧಿಗೆ ಅವಕಾಶ ಇರುವುದಿಲ್ಲ ಎಂದು ತಿಳಿಸಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಶರಣು ಗೋಗೇರಿ ಮಾತನಾಡಿ, ರಾಜ್ಯಾದ್ಯಂತ 10 ಸಾವಿರ ಭಾರತ್ ಜೋಡೋ ಯುವ ಸಂಘಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ. ಜಿಲ್ಲೆಯಲ್ಲಿ ಸಂಘಗಳ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, BJYS ಪೋರ್ಟಲ್, ಮೊಬೈಲ್ ಆ್ಯಪ್, ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಹಾಗೂ ನಾಗರಿಕ ಸೇವಾ ಕೇಂದ್ರಗಳ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದರು.
ಅರ್ಜಿ ಸಲ್ಲಿಸಲು ಆಧಾರ್ ಕಡ್ಡಾಯವಾಗಿದ್ದು, ಸದಸ್ಯತ್ವಕ್ಕೆ 16ರಿಂದ 35 ವರ್ಷದೊಳಗಿನವರಾಗಿರಬೇಕು. ಒಂದು ಸಂಘ ರಚನೆಗೆ ಕನಿಷ್ಠ 100 ಸದಸ್ಯರು ಅಗತ್ಯವಿದ್ದು, ಸದಸ್ಯತ್ವ ನೋಂದಣಿ ಶುಲ್ಕ ₹10 ನಿಗದಿಪಡಿಸಲಾಗಿದೆ. ಸಂಘಗಳನ್ನು ಕರ್ನಾಟಕ ಸೊಸೈಟೀಸ್ ನೋಂದಣಿ ಕಾಯ್ದೆ-1960ರಡಿ ನೋಂದಾಯಿಸಬೇಕಿದ್ದು, ಜುಲೈ 31ರೊಳಗೆ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ.
ಪ್ರತಿ ಸಂಘವು ಕ್ರೀಡೆ, ಫಿಟ್ನೆಸ್, ಪರಿಸರ ಸಂರಕ್ಷಣೆ, ಕೌಶಲ್ಯಾಭಿವೃದ್ಧಿ, ಸಮುದಾಯ ಸೇವೆ, ಬಾಲ್ಯ ವಿವಾಹ ತಡೆ, ಅಪೌಷ್ಟಿಕತೆ ನಿವಾರಣೆ ಸೇರಿದಂತೆ ಸಮಾಜಮುಖಿ ಕಾರ್ಯಕ್ರಮಗಳನ್ನು ಕೈಗೊಳ್ಳಲಿದ್ದು, ಎಲ್ಲಾ ಚಟುವಟಿಕೆಗಳ ವಿವರವನ್ನು ಜಿಯೋ-ಟ್ಯಾಗ್ ಫೋಟೋಗಳೊಂದಿಗೆ ಸಾಫ್ಟ್ವೇರ್ನಲ್ಲಿ ಅಪ್ಲೋಡ್ ಮಾಡಬೇಕು ಎಂದು ತಿಳಿಸಲಾಯಿತು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್., ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸಿ.ಆರ್. ಮುಂಡರಗಿ, ನಗರಸಭೆ ಪೌರಾಯುಕ್ತ ರಾಜಾರಾಮ ಪವಾರ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸನಗೌಡ ಕೊಟೂರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
“ಯುವಶಕ್ತಿಯನ್ನು ಸಕಾರಾತ್ಮಕವಾಗಿ ಬಳಸಿಕೊಂಡರೆ ಸಮಾಜದಲ್ಲಿ ಉತ್ತಮ ಬದಲಾವಣೆ ತರಲು ಸಾಧ್ಯ. ಭಾರತ್ ಜೋಡೋ ಯುವ ಸಂಘಗಳು ಯುವಕರಲ್ಲಿ ನಾಯಕತ್ವ, ಶಿಸ್ತು ಹಾಗೂ ಸಾಮಾಜಿಕ ಬದ್ಧತೆಯನ್ನು ಬೆಳೆಸುವ ವೇದಿಕೆಯಾಗಬೇಕು. ಸಂಘಗಳ ರಚನೆ ಸಂಪೂರ್ಣ ಪಾರದರ್ಶಕವಾಗಿ ನಡೆಯಬೇಕು.”
— ಸಿ.ಎನ್. ಶ್ರೀಧರ್, ಜಿಲ್ಲಾಧಿಕಾರಿ



