ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಪುಂಡಾಟ ಮಿತಿ ಮೀರಿದೆ. ಗಲಾಟೆ, ದರೋಡೆ, ಹಲ್ಲೆಗಳು ನಡೆಯುತ್ತಲೇ ಇವೆ.
ಇದೀಗ ವಿಧಾನಸೌಧದ ಮೆಟ್ರೋ ನಿಲ್ದಾಣದ ಮುಂಭಾಗದಲ್ಲಿ ಯುವಕರ ಗುಂಪೊಂದು ಒಬ್ಬ ವಿದ್ಯಾರ್ಥಿ ಮತ್ತು ಅವರ ಸಹೋದರನ ಮೇಲೆ ಹಲ್ಲೆ ನಡೆಸಿ ದರೋಡೆ ಮಾಡಿದೆ. ಆರೋಪಿಗಳು ವಿದ್ಯಾರ್ಥಿಯಿಂದ ಸುಮಾರು 9,182 ನಗದು ಹಣ ಮತ್ತು ಮೊಬೈಲ್ ಫೋನ್ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಕಿತ್ತುಕೊಂಡಿದ್ದಾರೆ.
ಅಣ್ಣ-ತಮ್ಮ ಇಬ್ಬರೂ ಸಿನಿಮಾ ನೋಡಿ ವಿಧಾನಸೌಧದ ಲೈಟಿಂಗ್ ನೋಡಲು ಬಂದಿದ್ದರು. ಈ ವೇಳೆ ಹೈಕೋರ್ಟ್ ಮುಂಭಾಗ ಇರುವ ಮೆಟ್ರೋ ನಿಲ್ದಾಣದ ಮುಂದೆ ಡಕಾಯಿತಿ ನಡೆದಿದೆ. ಬಿಮಲ್ ಗಿರಿ ಎಂಬಾತನಿಗೆ ಹಲ್ಲೆ ನಡೆಸಿ ಡಕಾಯಿತಿ ಮಾಡಲಾಗಿದೆ. ಮೊದಲಿಗೆ ನಮ್ಮನ್ನು ಹಿಡಿದುಕೊಂಡು ಬೆದರಿಕೆ ಹಾಕಿ ಹಲ್ಲೆ ನಡೆಸಿದರು.
ಬಳಿಕ ನಮ್ಮ ಬಳಿಯಿದ್ದ ಹಣ ಮತ್ತು ಮೊಬೈಲ್ ಅನ್ನು ಕಿತ್ತುಕೊಂಡು ಹೋಗಿದ್ದಾರೆ ಎಂದು ಸಂತ್ರಸ್ತರು ದೂರು ನೀಡಿದ್ದಾರೆ. ಹಲ್ಲೆ ಮಾಡಿ ಮೂವತ್ತು ಸಾವಿರದ ಮೊಬೈಲ್ ಫೋನ್, 9,182 ರೂ. ಹಣ ಕಸಿದು ಪರಾರಿಯಾಗಿದ್ದಾರೆಂದು ದೂರಲಾಗಿದೆ. ಘಟನೆ ಸಂಬಂಧಿಸಿ ವಿಧಾಸೌಧದ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಡಕಾಯಿತಿ ಎಂದು ಕೇಸ್ ದಾಖಲು ಮಾಡಿಕೊಂಡು ವಿಧಾನಸೌಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದೇ ಸ್ಥಳದಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ, ನೇಪಾಳ ಮೂಲದ ಸುಮಾರು 40 ರಿಂದ 50 ಯುವಕರ ಗುಂಪೊಂದು ಪರಸ್ಪರ ಹೊಡೆದಾಡಿಕೊಂಡಿದೆ. ಮಾಹಿತಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿ, ಲಾಠಿ ಬೀಸಿ ಗುಂಪನ್ನು ಚದುರಿಸಿದ್ದಾರೆ.


