ಕೋಲಾರ: ಕೋಲಾರ ಜಿಲ್ಲೆಯ ಮಾಲೂರು ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಇಬ್ಬರು ಪ್ರತ್ಯೇಕ ಆರೋಪಿಗಳಿಂದ 60 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನ, ವಜ್ರ ಹಾಗೂ ಬೆಳ್ಳಿ ಆಭರಣಗಳು ವಶಕ್ಕೆ ಪಡೆದಿದ್ದಾರೆ. ಪಶ್ಚಿಮ ಬಂಗಾಳ ಮೂಲದ ಹುಸ್ ದರ್ ಶೇಖ್ (24) ಹಾಗೂ ತಮಿಳುನಾಡು ಮೂಲದ ಉಮಾಶಂಕರ್ (27) ಬಂಧಿತ ಆರೋಪಿಗಳಾಗಿದ್ದು,
ಹುಸ್ ದರ್ ಶೇಖ್ ಮಾಲೂರು ತಾಲೂಕಿನ ಚಿಕ್ಕತಿರುಪತಿ ಗ್ರಾಮದ ದಿ ಎಂಪೈರಿಯನ್ ಅಪಾರ್ಟ್‌ಮೆಂಟ್‌ನಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ವೇಳೆ ಮನೆಯ ಚಲನವಲನವನ್ನು ಗಮನಿಸಿ ಕಳ್ಳತನಕ್ಕೆ ಯತ್ನಿಸಿದ್ದ.
ನವೆಂಬರ್ 4ರಂದು ಪ್ರೀತ್ ಕಮಲ್ ಎಂಬ ಮಹಿಳೆಯ ವಿಲ್ಲಾದಲ್ಲಿ ಯಾರೂ ಇರದ ಸಮಯವನ್ನು ಬಳಸಿಕೊಂಡು, ಸುಮಾರು 40 ಲಕ್ಷ ಮೌಲ್ಯದ 272 ಗ್ರಾಂ ಚಿನ್ನ–ವಜ್ರಾಭರಣ ಹಾಗೂ 640 ಗ್ರಾಂ ಬೆಳ್ಳಿ ವಸ್ತುಗಳನ್ನು ಕದ್ದಿದ್ದಾನೆ. ನಂತರ ಪರಾರಿಯಾಗಿದ್ದ ಶೇಖ್ ಅನ್ನು ಪೊಲೀಸರು ಶೋಧಿಸಿ ಬಂಧಿಸಿದ್ದಾರೆ.
ತಮಿಳುನಾಡು ಮೂಲದ ಆರೋಪಿಯಾದ ಉಮಾಶಂಕರ್ ಮನೆ ಕಳ್ಳತನ, ಸರಗಳ್ಳತನ ಮತ್ತು ಗಮನ ಬೇರೆಡೆ ಸೆಳೆಯುವ ಮೂಲಕ ಕಳ್ಳತನ ಮಾಡುವ ಶೈಲಿಗೆ ಹೆಸರಾದವನು. ನವೆಂಬರ್ 11ರಂದು ಮಾಲೂರಿನ ವೈಟ್ ಗಾರ್ಡನ್ ಬಳಿ ಅನುಮಾನಾಸ್ಪದವಾಗಿ ತಿರುಗುತ್ತಿದ್ದಾಗ ಪೊಲೀಸರ ಕಣ್ಣೀಗೆ ಬಿದ್ದಿದ್ದಾನೆ.
ಓಡಲು ಪ್ರಯತ್ನಿಸಿದ ಉಮಾಶಂಕರ್‌ನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ, ಹಲವು ಕಳ್ಳತನಗಳಲ್ಲಿ ತಾನೇ ತೊಡಗಿದ್ದನೆಂದು ಒಪ್ಪಿಕೊಂಡಿದ್ದಾನೆ. ಬಂಧಿತ ಆರೋಪಿಯಿಂದ 170 ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿತ್ತಿದ್ದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟಾರೆ 21 ಲಕ್ಷ ಮೌಲ್ಯದ ಆಸ್ತಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.


