ಬೆಂಗಳೂರು: ಸಾಕು ನಾಯಿಯೊಂದಿಗೆ ರಾತ್ರಿ ವಾಕಿಂಗ್‌ಗೆ ತೆರಳಿದ್ದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿ, ಆಕೆಯ ಮೊಬೈಲ್ ಫೋನ್ ಕಸಿದುಕೊಂಡು ಪರಾರಿಯಾಗಿದ್ದ ಯುವಕನನ್ನು ಜ್ಞಾನಭಾರತಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ವಿಘ್ನೇಶ್ (19), ಬ್ಯಾಡರಹಳ್ಳಿ ನಿವಾಸಿ ಎಂದು ಗುರುತಿಸಲಾಗಿದೆ. ಕಳೆದ ನವೆಂಬರ್ 7ರಂದು ರಾತ್ರಿ ಸುಮಾರು 10:30ರ ವೇಳೆಗೆ ಉಪಕಾರ್ ಲೇಔಟ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ಮಹಿಳೆ ತನ್ನ ಸಾಕು ನಾಯಿಯನ್ನು ವಾಕಿಂಗ್‌ಗೆ ಕರೆದುಕೊಂಡು ಹೊರಟಿದ್ದಾಗ ವಿಘ್ನೇಶ್ ಆಕೆಯ ಬಳಿ ಬಂದು “ನಾಯಿ ಚೆನ್ನಾಗಿದೆ, ಮುಟ್ಟಬಹುದೇ?” ಎಂದು ಕೇಳಿದ್ದಾನೆ. ಮಹಿಳೆ ಒಪ್ಪಿಗೆ ನೀಡಿದ ನಂತರ, ನಾಯಿಯನ್ನು ಮುಟ್ಟುವ ನೆಪದಲ್ಲಿ ಆಕೆಯ ದೇಹದ ಸೂಕ್ಷ್ಮ ಭಾಗಗಳನ್ನು ಮುಟ್ಟಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.
ಯುವಕನ ದುರ್ವರ್ತಗೆ ಮಹಿಳೆ ಗಾಬರಿಯಾಗಿ ಕೈಯಲ್ಲಿದ್ದ ಮೊಬೈಲ್ ಫೋನ್ ಕೆಳಗೆ ಬೀಳಿಸಿದ್ದಾರೆ. ಈ ಸಂದರ್ಭದಲ್ಲಿ ಆರೋಪಿ ಕೆಳಗೆ ಬಿದ್ದ ಮಹಿಳೆಯ ಫೋನ್ ಎತ್ತಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ.ಮಹಿಳೆ ತಕ್ಷಣ ಜ್ಞಾನಭಾರತಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ತಾಂತ್ರಿಕ ಮಾಹಿತಿ ಮತ್ತು ಸಿಸಿಟಿವಿ ದೃಶ್ಯಗಳ ಸಹಾಯದಿಂದ ಆರೋಪಿಯನ್ನು ಗುರುತಿಸಿ ಬಂಧಿಸಿದ್ದಾರೆ.


