ವಿಜಯಸಾಕ್ಷಿ ಸುದ್ದಿ, ಡಂಬಳ: ಸದಾಕಾಲ ತಮ್ಮ ಪ್ರಾಮಾಣಿಕ ಕಲಿಕೆಯ ಮೂಲಕ ಸಾವಿರಾರು ಪ್ರತಿಭಾವಂತ ವಿದ್ಯಾರ್ಥಿಗಳ ಭವಿಷ್ಯ ರೂಪಿಸುತ್ತಿರುವ ಕದಾಂಪುರ ಗ್ರಾಮದ ಪ್ರೌಢಶಾಲೆಯ ಗಣಿತ ವಿಷಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಬಸಪ್ಪ ಎನ್. ಉಕ್ಕುಂದ ಅವರು ರೋಣದ ಹೊಳೆಆಲೂರಿನ ಎಸ್.ಎಸ್. ಆಡಿನ ಜನಸೇವಾ ಸಂಸ್ಥೆ ನವೆಂಬರ್ 23ರಂದು ಹಮ್ಮಿಕೊಂಡಿರುವ `ಗದಗ ಜಿಲ್ಲಾ ಕನ್ನಡ ನುಡಿ ಸಮ್ಮೇಳನ’ ಕಾರ್ಯಕ್ರಮದಲ್ಲಿ ಕೊಡಮಾಡುವ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ನಾಗಪ್ಪ-ಲಲಿತಮ್ಮ ಅವರು ಬಸಪ್ಪ ಉಕ್ಕುಂದ ಅವರ ತಂದೆ-ತಾಯಿಗಳು. ಯಲ್ಲಾಪುರದಲ್ಲಿ ಪ್ರಾಥಮಿಕ ಶಿಕ್ಷಣ, ದೇವರಗುಡ್ಡದ ಶ್ರೀ ಮಾಂತೇಶ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣ ಮುಗಿಸಿದರು. ಪಿಯುಸಿ ಬಳಿಕ ಆರ್ಟಿಎಸ್ ಮಹಾವಿದ್ಯಾಲಯ ಕಾಲೇಜಿನಲ್ಲಿ ಬಿಎಸ್ಸಿ, ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಬಿಇಡ್ ಶಿಕ್ಷಣ ಪಡೆದರು. ಎಂಎಸ್ಸಿ ದೂರ ಶಿಕ್ಷಣದಲ್ಲಿ ಪಡೆದುಕೊಂಡಿದ್ದಾರೆ.
ವೀಣಾ ಅವರನ್ನು ಕೈ ಹಿಡಿದರು. 2010ರಲ್ಲಿ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಗಡಿ ಭಾಗವಾಗಿದ್ದ ದಳಸನೂರ ಗ್ರಾಮದಲ್ಲಿ ವೃತ್ತಿ ಜೀವನ ಪ್ರಾರಂಭಿಸಿ, 6 ವರ್ಷಗಳ ಕಾಲ ಸೇವೆ ಸಲ್ಲಿಸಿ ನಂತರ ಮುಂಡರಗಿ ತಾಲೂಕಿನ ಕದಾಂಪುರ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಸೃಜನಶೀಲತೆಯಿಂದ ಗಣಿತದ ಮೂಲಭೂತ ಜ್ಞಾನವನ್ನು ಬಲಗೊಳಿಸಿ, ತಾರ್ಕಿಕ ಚಿಂತನೆಗೆ ಉತ್ತೇಜನ ನೀಡಿ, ಸಮಸ್ಯೆ ಪರಿಹಾರದ ಸಾಮರ್ಥ್ಯವನ್ನು ವಿದ್ಯಾರ್ಥಿಗಳಲ್ಲಿ ರೂಪಿಸುವುದರ ಮೂಲಕ ವಿದ್ಯಾರ್ಥಿಗಳ ಮೆಚ್ಚುಗೆಯ ಶಿಕ್ಷಕರಾಗಿದ್ದಾರೆ.
ಕರ್ನಾಟಕ ರಾಜ್ಯ ಗಣಿತ ವಿಷಯದ ಸಂಚಾಲಕರಾಗಿ, ಗದಗನಲ್ಲಿ ನಡೆದ ಜಿಲ್ಲಾ ಮಟ್ಟದ ಮಕ್ಕಳ ಗಣಿತ, ಗಣಿತ ವಿಷಯದ ಮಾರ್ಗದರ್ಶಕರಾಗಿ, ಸಂಪನ್ಮೂಲ ವ್ಯಕ್ತಿಯಾಗಿ ಹಲವು ಗಣಿತ ವಿಷಯ ಕಾರ್ಯಾಗಾರಗಳನ್ನು ನಡೆಸುವುದರ ಮೂಲಕ ಸೇವೆ ಸಲ್ಲಿಸಿದ ಇವರ ಕಾರ್ಯಕ್ಕೆ ಶಿಕ್ಷಕರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿದ್ಯಾರ್ಥಿಗಳ ಮೆಚ್ಚಿನ ಶಿಕ್ಷಕರಾದ ಬಸಪ್ಪ ಉಕ್ಕುಂದ ಅವರು ಗಣಿತ ಭಾಷೆಯ ಬೋಧನಾ ಕೌಶಲ್ಯದ ಮೂಲಕ ಗ್ರಾಮೀಣ ಮಕ್ಕಳ ಆಶಾಕಿರಣವಾಗಿ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಿ ಹಲವು ಉನ್ನತ ಹುದ್ದೆಗಳನ್ನು ಹೊಂದುವಂತೆ ಮಾಡಿದ್ದಾರೆ. ಗಣಿತ ಶಿಕ್ಷಣ ನೀಡುವುದರೊಂದಿಗೆ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ನಿರಂತರ ಶ್ರಮಿಸುತ್ತಿರುವ ಫಲವಾಗಿ ಸಾವಿರಾರು ವಿದ್ಯಾರ್ಥಿಗಳು ಉನ್ನತ ಹುದ್ದೆಯನ್ನು ಹೊಂದುವಂತೆ ಮಾಡುತ್ತಿರುವ ಶ್ರೇಯಸ್ಸು ಇವರದಾಗಿದೆ.
“ವಿದ್ಯಾರ್ಥಿಗಳ ಕಲಿಕೆಗಾಗಿ ನಿರಂತರವಾಗಿ ತಮ್ಮನ್ನು ತೊಡಗಿಸಿಕೊಂಡು ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕ ಬಸಪ್ಪ ಉಕ್ಕುಂದ ಅವರನ್ನು ಗುರುತಿಸಿ ಎಸ್.ಎಸ್. ಆಡಿನ ಜನಸೇವಾ ಸಂಸ್ಥೆ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಪ್ರಶಂಸನೀಯ.”
ಬಸಪ್ಪ ಚನ್ನಬಸಪ್ಪ ನರೇಗಲ್ಲ.
ಎಸ್ಡಿಎಮ್ಸಿ ಅಧ್ಯಕ್ಷ, ಕದಾಂಪುರ.
“ವಿದ್ಯಾರ್ಥಿಗಳ ಕಲಿಕೆಗಾಗಿ ನಿರಂತರ ಸೃಜನಾತ್ಮಕವಾದ ಕಾರ್ಯ, ಶಿಸ್ತು, ಸೇವೆ, ವಿದ್ಯಾರ್ಥಿಗಳ ಜ್ಞಾನದ ಪ್ರಾವೀಣ್ಯತೆ ಹೆಚ್ಚಿಸಲು ಶ್ರಮಿಸುತ್ತಿರುವ ಶಿಕ್ಷಕ ಬಸಪ್ಪ ಉಕ್ಕುಂದ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಒಲಿದುಬಂದಿರುವುದು ಸಂತೋಷ ತಂದಿದೆ”
ಎ.ಎಲ್. ಬಿಜಾಪುರ.
ಮುಖ್ಯೋಪಾಧ್ಯಾಯ,
ಸರ್ಕಾರಿ ಪ್ರೌಢಶಾಲೆ ಕದಾಂಪುರ.
“ಪ್ರತಿಯೊಂದು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಗಣಿತ ಸೇರಿದಂತೆ ವಿವಿಧ ವಿಷಯಗಳು ಪ್ರಮುಖ ಪಾತ್ರ ವಹಿಸಲಿದ್ದು, ವಿದ್ಯಾರ್ಥಿಗಳು ಈಗಿನಿಂದಲೇ ಗಣಿತ ವಿಷಯದಲ್ಲಿ ಪ್ರಾವೀಣ್ಯತೆ ಹೊಂದಲು ಮುಂದಾಗಬೇಕು”
ಬಸಪ್ಪ ಎನ್. ಉಕ್ಕುಂದ.
ಪ್ರಶಸ್ತಿ ಪುರಸ್ಕೃತ ಶಿಕ್ಷಕ.


