ವಿಜಯಸಾಕ್ಷಿ ಸುದ್ದಿ, ಗದಗ: ವಿದ್ಯಾರ್ಥಿಗಳಿಗೆ ನಮ್ಮ ಕನ್ನಡದ ಕವಿಗಳೇ ಆದರ್ಶ. ಡಿ.ಎಸ್. ಕರ್ಕಿ, ಹುಯಿಲಗೋಳ ನಾರಾಯಣರಾವ, ಸಿದ್ದಯ್ಯ ಪುರಾಣಿಕ, ಕುವೆಂಪು, ಚೆನ್ನವೀರ ಕಣವಿಯಂತಹ ಕನ್ನಡದ ಮಹಾನ್ ಕವಿಗಳು ಸ್ವತಃ ಕನ್ನಡಾಭಿಮಾನದ ಹಾಡು ರಚಿಸಿ, ಹಾಡಿ ಕನ್ನಡಿಗರಲ್ಲಿ ಜಾಗೃತಿ ಮೂಡಿಸಿದರು ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಹೇಳಿದರು.
ಅವರು ಹುಲಕೋಟಿಯ ಕೆ.ಎಚ್. ಪಾಟೀಲ ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಕವಿವ ಸಂಘವು ಆಯೋಜಿಸಿದ್ದ `ಕನ್ನಡ–ಕನ್ನಡಿಗ–ಕರ್ನಾಟಕ’ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಕ್ಕರಿ ಬಾಳಾಚಾರ್ಯರು ಧಾರವಾಡದಲ್ಲಿ ಜರುಗಿದ 4ನೇ ಕನ್ನಡ ಸಾಹಿತ್ಯ ಸಮ್ಮೇಳನ ಹಣಕಾಸಿನ ಮುಗ್ಗಟ್ಟಿನಿಂದ ಸ್ಥಗಿತಗೊಳ್ಳುವ ಸಂದರ್ಭ ಬಂದಾಗ ಪ್ರತಿಯೊಬ್ಬರ ಮನೆ ಬಾಗಿಲಿಗೆ ಹೋಗಿ ಕನ್ನಡದ ದಾಸಯ್ಯ ಬಂದಿದ್ದಾನೆಂದು ಜೋಳಿಗೆ ಹಾಕಿ ಹಣ ಸಂಗ್ರಹಿಸಿದರು. ಕವಿವ ಸಂಘವು 136 ವರ್ಷಗಳಿಂದ ಒಡೆದ ಕನ್ನಡಿಗರ ಮನಸ್ಸು ಕಟ್ಟುವ ಕಾರ್ಯ ಮಾಡುತ್ತಿದೆ. ಜಾತಿ–ಧರ್ಮದ ಹೆಸರಿನಲ್ಲಿ ಕನ್ನಡ ಭಾಷೆ ಆಪತ್ತಿನಲ್ಲಿದ್ದು, ಯುವಕರು ಕನ್ನಡ ಕಟ್ಟಲು ಸಂಘಟನೆ ಮೂಲಕ ಹೋರಾಡಬೇಕು ಎಂದರು.
ಪ್ರಾಚಾರ್ಯ ಡಾ. ಎಸ್.ಎಂ. ಕುರಿ ಉಪನ್ಯಾಸ ನೀಡಿ, ಕವಿವ ಸಂಘಕ್ಕೆ 136 ವರ್ಷಗಳ ಇತಿಹಾಸವಿದೆ. ನಾಡೋಜ ಡಾ. ಪಾಟೀಲ ಪುಟ್ಟಪ್ಪನವರು ಅಧ್ಯಕ್ಷರಾಗಿ 53 ವರ್ಷ ಸುದೀರ್ಘವಾಗಿ ಸಂಘವನ್ನು ಮುನ್ನಡೆಸಿದರು. ಕನ್ನಡ ನಾಡಿನಷ್ಟು ಸಮೃದ್ಧ, ಶ್ರೀಮಂತ ರಾಜ್ಯ ಬೇರೊಂದಿಲ್ಲ. ಕನ್ನಡದ ಅನೇಕ ಶಾಸನಗಳು ಕನ್ನಡ ನಾಡಿನ ಜನರ ಗುಣಸ್ವಭಾವ, ಸಮೃದ್ಧತೆ, ಉದಾರತೆಯ ಬಗ್ಗೆ ಮುಕ್ತ ಕಂಠದಿಂದ ಹೊಗಳಿವೆ ಎಂದರು.
ಅಧ್ಯಕ್ಷತೆ ವಹಿದ್ದ ಪ್ರಾಚಾರ್ಯೆ ಡಾ. ಸುಧಾ ಜಗೇರಿ ಮಾತನಾಡಿದರು. ಡಾ. ಮಹಾನಂದ ಹಿರೇಮಠ ಸ್ವಾಗತಿಸಿದರು. ಕವಿವ ಸಂಘದ ಶಿಕ್ಷಣ ಮಂಟಪದ ಸಂಚಾಲಕ ವೀರಣ್ಣ ಒಡ್ಡಿನ ಪ್ರಾಸ್ತಾವಿಕವಾಗಿ ಮಾತನಾಡಿದರು. ಭೀಮಸಿ ನಿರೂಪಿಸಿದರು, ಡಾ. ಮಂಜುನಾಥ್ ತ್ಯಾಲಗಡಿ ವಂದಿಸಿದರು. ಡಾ. ರಮೇಶ ಹುಲಕುಂದ ಕಾರ್ಯಕ್ರಮ ಸಂಯೋಜಿಸಿದ್ದರು.
ಡಾ. ಲಕ್ಷ್ಮಣ ಮುಳುಗುಂದ, ಡಾ. ಅಣ್ಣಪ್ಪ ಹಂಜೆ, ಡಾ. ಉಲ್ಲಾಸ ಶೆಟ್ಟಿ, ಸಿಬ್ಬಂದಿಗಳು ಸೇರಿದಂತೆ ವಿದ್ಯಾರ್ಥಿಗಳಿದ್ದರು. ಕೊತಬಾಳದ ಶಂಕರಣ್ಣ ಸಂಕಣ್ಣವರ್ ತಂಡದಿಂದ ನಾಡು–ನುಡಿ ಜಾಗೃತಿಯ ಹಾಡುಗಳು ಪ್ರಸ್ತುತವಾದವು.


