ತಮಿಳುನಾಡಿನ ಸ್ಟಾರ್ ನಟ ದಳಪತಿ ವಿಜಯ್ ಈಗ ರಾಜಕೀಯಕ್ಕೆ ಎಂಟ್ರಿ ನೀಡಿ, ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸುತ್ತಿದ್ದಾರೆ. ‘ಜನ ನಾಯಗನ್’ ಅವರ ಕೊನೆಯ ಸಿನಿಮಾ ಆಗಲಿದೆ ಎಂದು ಘೋಷಿಸಿದ ವಿಜಯ್, ಮನೆ–ಬೈಕ್–ಕಾರು ಗ್ಯಾರಂಟಿ, ಪ್ರತಿಯೊಬ್ಬ ಮಗುವಿಗೂ ಶಿಕ್ಷಣ, ಪ್ರತಿ ಮನೆಯಲ್ಲಿ ಗ್ಯಾರಂಟಿ ಆದಾಯ, ಸರ್ಕಾರಿ ಆಸ್ಪತ್ರೆಗಳ ಸುಧಾರಣೆ ಸೇರಿದಂತೆ ದೊಡ್ಡ ಮಟ್ಟದ ಭರವಸೆಗಳನ್ನು ನೀಡಿದ್ದಾರೆ. ಆದರೆ ಕರೂರಿನ ಪ್ರಚಾರ ಸಭೆಯಲ್ಲಿ ನಡೆದ ಕಾಲ್ತುಳಿತ ದುರಂತದಲ್ಲಿ 41 ಮಂದಿ ಸಾವನ್ನಪ್ಪಿದ್ದು, ವಿಜಯ್ ಅವರ ರಾಜಕೀಯ ಕ್ಯಾಂಪೈನ್‌ಗೂ ದೊಡ್ಡ ಹಿನ್ನೆಡೆ ತಂದಿದೆ.
ವಿಜಯ್ ಸಿನಿಮಾ ಜಗತ್ತಿನಲ್ಲೇ ಬೆಳ್ಳಿ ಪರದೆ ಮೇಲಿನ ಸೂಪರ್‌ಸ್ಟಾರ್. ಅವರ ಸಿನಿಮಾಗಳು ಮೊದಲ ದಿನವೇ ಕೋಟ್ಯಂತರ ರೂ. ಗಳಿಕೆ ಮಾಡುತ್ತವೆ. ಕೆಲವೊಮ್ಮೆ ಕೆಟ್ಟ ಸಿನಿಮಾಗಳೂ ಸಹ 200–300 ಕೋಟಿ ರೂ. ಗಳಿಸುವ ಮಟ್ಟಿಗೆ ಅವರ ಕ್ರೇಜ್ ಇದೆ. ಆದರೆ ಈಗ ಅವರು ಸಿನಿಮಾಕ್ಕೆ ಗುಡ್‌ಬೈ ಹೇಳಿ, ಶುದ್ಧ ರಾಜಕೀಯಕ್ಕೆ ಬಾಗಿಲು ತೆರೆದಿದ್ದಾರೆ.
ಕಳೆದ ಕೆಲವು ತಿಂಗಳುಗಳಿಂದ ವಿಜಯ್ ಭರ್ಜರಿ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದು, ತಮ್ಮ ‘ತಮಿಳಗ ವೆಟ್ರಿ ಕಳಗಂ’ ಪಕ್ಷದ ಉದ್ದೇಶಗಳನ್ನು ಜನರ ಮುಂದೆ ಪ್ರಸ್ತಾಪಿಸಿದ್ದಾರೆ. ಪ್ರಣಾಳಿಕೆ ಮುಂದಿನ ವರ್ಷ ಬಿಡುಗಡೆಯಾಗಲಿದ್ದರೂ, ಅದರಲ್ಲಿನ ಕೆಲವು ಅಂಶಗಳನ್ನು ಅವರು ಈಗಲೇ ಹಂಚಿಕೊಂಡಿದ್ದಾರೆ.
“ನಾವು ಅಧಿಕಾರಕ್ಕೆ ಬಂದರೆ, ಖಂಡಿತ ಬರುತ್ತೇವೆ. ಜನರಿಗಾಗಿ ನೀಡಬೇಕಾದ ಯೋಜನೆಗಳನ್ನು ಈಗಾಗಲೇ ತಯಾರು ಮಾಡಿಕೊಂಡಿದ್ದೇವೆ. ಪ್ರತಿ ವ್ಯಕ್ತಿಗೆ ಇರಲು ಮನೆ, ಆ ಮನೆಯಲ್ಲಿ ಮೊಟಾರ್ ಬೈಕ್, ಮುಂದಿನ ಹಂತದಲ್ಲಿ ಕಾರು ನೀಡುವುದು ನಮ್ಮ ಗುರಿ” ಎಂದು ವಿಜಯ್ ಘೋಷಿಸಿದರು.
ಅಲ್ಲದೇ, “ಪ್ರತಿ ಮಗು ಕನಿಷ್ಠ ಪದವಿ ವರೆಗೆ ಶಿಕ್ಷಣ ಪಡೆಯಬೇಕು. ಪ್ರತಿ ಮನೆಯಲ್ಲಿ ಒಬ್ಬ ವ್ಯಕ್ತಿಗೆ ಗ್ಯಾರಂಟಿ ಆದಾಯ ನೀಡುವ ಯೋಜನೆ ಜಾರಿಗೆ ಬರುತ್ತದೆ. ಉದ್ಯೋಗಗಳನ್ನು ಸೃಷ್ಟಿಸುತ್ತೇವೆ. ಸರ್ಕಾರಿ ಆಸ್ಪತ್ರೆಗಳ ಸ್ಥಿತಿಯನ್ನು ಸಂಪೂರ್ಣ ಬದಲಿಸಿ, ಜನರು ಭರವಸೆಯಿಂದ ಚಿಕಿತ್ಸೆ ಪಡೆಯುವ ಮಟ್ಟಕ್ಕೆ ಸುಧಾರಣೆ ಮಾಡುತ್ತೇವೆ” ಎಂದು ವಿಜಯ್ ಹೇಳಿದರು.
ತಮಿಳಗ ವೆಟ್ರಿ ಕಳಗಂ ಪಕ್ಷವನ್ನು ಆರಂಭಿಸಿರುವ ವಿಜಯ್, ರಾಜ್ಯದಾದ್ಯಂತ ವೇಗವಾಗಿ ಪ್ರಚಾರ ನಡೆಸುತ್ತಿದ್ದಾರೆ. ಆದರೆ ಕರೂರಿನ ರೋಡ್‌ಶೋ ವೇಳೆ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ 41 ಮಂದಿ ಪ್ರಾಣ ಕಳೆದುಕೊಂಡಿದ್ದು, ವಿಜಯ್ ಅವರ ಕ್ಯಾಂಪೈನ್‌ಗೂ ದೊಡ್ಡ ಆಘಾತ ತಂದಿದೆ.



