ಬೆಂಗಳೂರು: ‘ರಂಗಿತರಂಗ’ ಖ್ಯಾತಿಯ ನಿರೂಪ್ ಭಂಡಾರಿ ಅಭಿನಯದ ಬಹುನಿರೀಕ್ಷಿತ ‘ಅತಿಕಾಯ’ ಚಿತ್ರಕ್ಕೆ ಬಹುಭಾಷಾ ನಟಿ ಸ್ವಾತಿಷ್ಟ ಕೃಷ್ಣನ್ ನಾಯಕಿಯಾಗಿ ಸೇರ್ಪಡೆಯಾಗಿದ್ದು, ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಕನ್ನಡ, ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ಸ್ವಾತಿಷ್ಟ, ಈ ಚಿತ್ರದಲ್ಲಿ ಕೇವಲ ನಾಯಕಿಯಾಗಿ ಮಾತ್ರವಲ್ಲದೆ ಕಥೆಯ ಬೆಳವಣಿಗೆಯ ಪ್ರಮುಖ ಕೊಂಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ಮೂಲತಃ ಧಾರವಾಡದವರಾದ ಸ್ವಾತಿಷ್ಟ ಕೃಷ್ಣನ್, ತಮಿಳಿನ ಸವರಕತ್ತಿ, ವಿಕ್ರಮ್, ತೆಲುಗಿನ ಗುಂಡೇ ಕಥಾ ವಿಂಟಾರ ಹಾಗೂ ಕನ್ನಡದ ಒಂದು ಸರಳ ಪ್ರೇಮಕಥೆ, ರಕ್ಕಸಪುರದೋಳ್ ಸೇರಿದಂತೆ ಹಲವು ಚಿತ್ರಗಳಲ್ಲಿ ಗಮನಾರ್ಹ ಅಭಿನಯ ನೀಡಿದ್ದಾರೆ. ಇದೀಗ ‘ಅತಿಕಾಯ’ ಮೂಲಕ ಮತ್ತೊಮ್ಮೆ ಕನ್ನಡ ಪ್ರೇಕ್ಷಕರ ಮುಂದೆ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಈವರೆಗೆ ಚಾಕೊಲೇಟ್ ಬಾಯ್ ಮತ್ತು ಲವರ್ ಬಾಯ್ ಇಮೇಜ್‌ನಲ್ಲಿ ಗುರುತಿಸಿಕೊಂಡಿದ್ದ ನಿರೂಪ್ ಭಂಡಾರಿ, ‘ಅತಿಕಾಯ’ದಲ್ಲಿ ಸಂಪೂರ್ಣ ವಿಭಿನ್ನವಾದ ರಗಡ್, ರಕ್ತಸಿಕ್ತ ಮಾಸ್ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪಾತ್ರಕ್ಕಾಗಿ ವಿಶೇಷ ವರ್ಕೌಟ್ ಮಾಡಿ ದೇಹದಾರ್ಢ್ಯ ಬೆಳೆಸಿಕೊಂಡಿರುವ ಅವರು, ಗೆಟಪ್ ಹಾಗೂ ಡೈಲಾಗ್ ಡೆಲಿವರಿಯಲ್ಲೂ ಹೊಸ ಪ್ರಯೋಗ ಮಾಡಿದ್ದಾರೆ.
ಪದೇ ಪದೇ ಹಾಗೂ ನಮಕ್ಹರಾಮ್ ಚಿತ್ರದ ನಿರ್ದೇಶಕ ನಾಗರಾಜ್ ಪೀಣ್ಯ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ರಿಯಲಿಸ್ಟಿಕ್ ಮಾಸ್ ಆಕ್ಷನ್ ಕಥೆಯನ್ನು ತೆರೆಗೆ ತರುತ್ತಿದ್ದಾರೆ. ಬೆಂಗಳೂರಿನ ಜನಜಂಗುಳಿ ಪ್ರದೇಶಗಳಲ್ಲಿ ಬಹುತೇಕ ಚಿತ್ರೀಕರಣ ಪೂರ್ಣಗೊಂಡಿದ್ದು, ಚಿತ್ರ ಅಂತಿಮ ಹಂತದ ಶೂಟಿಂಗ್‌ಗೆ ಸಜ್ಜಾಗಿದೆ.
ಎ.ಎನ್. ಮೂವಿ ಮೇಕರ್ಸ್ ಹಾಗೂ ನಿಹಾಲ್ ಮೂವೀಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು ಜೆ. ಮಹೇಶ್ ಕುಮಾರ್ ಅರ್ಪಿಸುತ್ತಿದ್ದಾರೆ. ಹರೀಶ್ ರಾಯ್, ದಿನೇಶ್ ಮಂಗಳೂರು, ಬಿ. ಸುರೇಶ್, ಕಾಕ್ರೋಚ್ ಸುಧೀ, ವಜ್ರಧೀರ್ ಜೈನ್, ವರ್ಧನ್ ತೀರ್ಥಹಳ್ಳಿ, ಮಹಾಂತೇಶ್ ಹಾಗೂ ಜಾಕ್ ಜಾಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಉದಯಲೀಲ ಛಾಯಾಗ್ರಹಣ, ಶ್ರೀನಿವಾಸ್ ಪಿ. ಬಾಬು ಸಂಕಲನ ಮತ್ತು ಸಚಿನ್ ಬಸ್ರೂರು ಸಂಗೀತ ಚಿತ್ರಕ್ಕಿದೆ.



