ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಗೋವಿನಜೋಳದ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಕ್ಕಾಗಿ ಲಕ್ಷ್ಮೇಶ್ವರದಲ್ಲಿ ಸಮಗ್ರ ರೈತ ಸಂಘಟನೆಗಳ ಒಕ್ಕೂಟದಿಂದ ಕಳೆದ 13 ದಿನಗಳಿಂದ ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಇದುವರೆಗೂ ಶಾಂತ ರೀತಿಯಿಂದ ನಡೆದಿದೆ. ನ. 29ರಿಂದ ಉಗ್ರ ಸ್ವರೂಪ ಪಡೆದುಕೊಳ್ಳಲಿದ್ದು, ಮುಂದಾಗಬಹುದಾದ ಅನಾಹುತಕ್ಕೆ ಸರ್ಕಾರ ಉತ್ತರಿಸಬೇಕಾಗುತ್ತದೆ ಎಂದು ಹೋರಾಟ ವೇದಿಕೆಯ ಮುಖಂಡರಾದ ಮಂಜುನಾಥ ಮಾಗಡಿ, ರವಿಕಾಂತ ಅಂಗಡಿ ಎಚ್ಚರಿಕೆ ನೀಡಿದರು.
ಅವರು ಗುರುವಾರ ಧರಣಿ ಸತ್ಯಾಗ್ರಹ ವೇದಿಕೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಗೋವಿನ ಜೋಳ ಬೆಳೆದ ತಪ್ಪಿಗಾಗಿ ನಮ್ಮನ್ನು ನಾವು ದಂಡಿಸಿಕೊ ಡಿದ್ದೇವೆ. ಸರ್ಕಾರ ಭರವಸೆ ನೀಡಿದರೂ ರೈತರು ಹೋರಾಟ ಕೈ ಬಿಡಲಿಲ್ಲ. ಆದ್ರಳ್ಳಿ ಗವಿಮಠದ ಶ್ರೀ ಕುಮಾರ ಮಹಾರಾಜರು 5 ದಿನಗಳಿಂದ ಸಲ್ಲೇಖನ ವ್ರತ ಕೈಗೊಂಡು ಆಸ್ಪತ್ರೆ ಸೇರಿದ ಸುದ್ದಿ ರಾಜ್ಯ ಸರ್ಕಾರದ ಕಣ್ಣು ತೆರೆಸಿತು. ಮುಖ್ಯಮಂತ್ರಿಗಳು 8 ದಿನಗಳ ಹಿಂದೆಯೇ 10 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳವನ್ನು ಬೆಂಬಲ ಬೆಲೆಯಡಿ ಖರೀದಿಸುವ ನಿರ್ಧಾರ ಘೋಷಿಸಿದರು.
ಆದರೆ ಲಕ್ಷ್ಮೇಶ್ವರದಲ್ಲಿ ಖರೀದಿ ಕೇಂದ್ರ ಕಾರ್ಯಾರಂಭಗೊಳ್ಳುವವರೆಗೂ ಹೋರಾಟ ಮುಂದುವರೆಸುವ ಮೂಲಕ ದಿನೇ ದಿನೇ ಸರ್ಕಾರ, ಅಧಿಕಾರಿಗಳನ್ನು ಎಚ್ಚರಿಸುವ ಕಾರ್ಯ ಮಾಡುತ್ತಾ ಬಂದಿದ್ದೇವೆ. ನ. 28ರೊಳಗೆ ಖರೀದಿ ಕೇಂದ್ರಗಳು ಪ್ರಾರಂಭಗೊಳ್ಳದಿದ್ದರೆ ನ.29ರಿಂದ ಸರ್ಕಾರದ ಅಣುಕು ಶವಯಾತ್ರೆ, ಸರ್ಕಾರಿ ಕಚೇರಿಗಳಿಗೆ ಬೀಗ, ಬೆಳೆಯನ್ನು ರಾಜ್ಯ ರಸ್ತೆಗೆ ಹಾಕುವುದು, ಮಠಾಧೀಶರೊಂದಿಗೆ ನೂರಾರು ರೈತರ ಕಠಿಣ ಉಪವಾಸ ಸತ್ಯಾಗ್ರಹದಂತಹ ಉಗ್ರ ಸ್ವರೂಪದ ಹೋರಾಟಕ್ಕೆ ಮುಂದಾಗುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಪಕ್ಷಾತೀತ ರೈತ ಹೋರಾಟದ ಸಂಘದ ಅಧ್ಯಕ್ಷ ಮಹೇಶ ಹೊಗೆಸೊಪ್ಪಿನ, ಕರವೇ ಸ್ವಾಭಿಮಾನಿ ಸೇನೆಯ ಜಿಲ್ಲಾಧ್ಯಕ್ಷ ಶರಣು ಗೋಡಿ, ನಾಗರಾಜ ಚಿಂಚಲಿ ಮಾತನಾಡಿದರು.
ರೈತರಾದ ಚಂಬಣ್ಣ ಬಾಳಿಕಾಯಿ, ಬಸವರಾಜ ಬೆಂಡಿಗೇರಿ, ಪೂರ್ಣಾಜಿ ಖರಾಟೆ, ಶಿವಾನಂದ ಲಿಂಗಶೆಟ್ಟಿ, ನೀಲಪ್ಪ ಶರಸೂರಿ, ಚನ್ನಪ್ಪ ಷಣ್ಮುಕಿ, ಕಾಶಪ್ಪ ಮುಳಗುಂದ, ಹನಮಂತಪ್ಪ ಮಾದರ, ದೇವಪ್ಪ ಮಲ್ಲೂರ, ಸುರೇಶ ಹಟ್ಟಿ, ಬಸವರಾಜ ಹಿರೇಮನಿ, ಪ್ರಕಾಶ ಕೊಂಚಿಗೇರಿಮಠ, ಟಾಕಪ್ಪ ಸಾತಪುತೆ, ನಿಂಗಪ್ಪ ಗದ್ದಿ, ಮಲ್ಲೇಶಪ್ಪ ವಡ್ಡರ, ಶಿವನಗೌಡ್ರ ಅಡರಕಟ್ಟಿ, ರಾಜು ಗುಡಗೇರಿ, ಪರಶುರಾಮ ಲಕ್ಕಣ್ಣವರ, ಮುದಕಪ್ಪ ಗೋಡಿ, ದಾದಾಪೀರ ಮುಚ್ಚಾಲೆ, ಎಂ.ಎ. ಗದಗ, ತಿಮ್ಮಪ್ಪ ಸಿದ್ದಣ್ಣವರ, ಎಂ.ಎಚ್. ಬಟ್ಟೂರ, ರಾಜು ಬೆಲ್ಲದ ಮುಂತಾದವರಿದ್ದರು.
ಕೋಟ್
8/10 ದಿನ ಕಳೆದರೂ ಖರೀದಿ ಕೇಂದ್ರ ಪ್ರಾರಂಭಗೊಳ್ಳದ್ದರಿ ಂದ ನ. 29ರಿಂದ ನಾವು ಮತ್ತೆ ಉಪವಾಸ ಸತ್ಯಾಗ್ರಹಕ್ಕೆ ಮುಂದಾಗುತ್ತೇವೆ. ಸತ್ತರೂ ಸರಿ, ಕುಳಿತ ಜಾಗದಿಂದ ಕದಲುವುದಿಲ್ಲ. ಅನ್ನ, ನೀರು, ಔಷಧೋಪಚಾರ ತ್ಯಜಿಸುತ್ತೇವೆ. ನಮ್ಮೊಂದಿಗೆ ಈ ಬಾರಿ ಅನೇಕ ರೈತರು ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿದ್ದಾರೆ. ರೈತರ ನ್ಯಾಯಯುತ ಹೋರಾಟಕ್ಕೆ ಬೆಲೆ ಸಿಗದಿದ್ದರೆ ಪ್ರಾಣ ತ್ಯಾಗಕ್ಕೂ ಸಿದ್ಧ. ಮುಂದಾಗುವ ಅನಾಹುತಕ್ಕೆ ಸರ್ಕಾರ ತಕ್ಕ ಉತ್ತರ ಕೊಡಬೇಕಾಗುತ್ತದೆ.
– ಶ್ರೀ ಕುಮಾರ ಮಹಾರಾಜರು,
ಆದ್ರಳ್ಳಿ, ಗವಿಮಠ.



