ಬೆಂಗಳೂರು: ರಾಜ್ಯದಲ್ಲಿ ಸಿಎಂ ಸ್ಥಾನ ಮತ್ತು ಅಧಿಕಾರ ಹಂಚಿಕೆ ವಿಚಾರವಾಗಿ ರಾಜಕೀಯ ಚರ್ಚೆಗಳು ಗರಿಗೆದರಿರುವ ಸಂದರ್ಭದಲ್ಲಿ, ಈ ಗೊಂದಲವನ್ನು ಕಾಂಗ್ರೆಸ್ ಹೈಕಮಾಂಡ್ ಶೀಘ್ರದಲ್ಲೇ ಬಗೆಹರಿಸುತ್ತದೆ ಎಂದು CWC ಸದಸ್ಯ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾಯಕತ್ವದ ಗೊಂದಲದ ಸಂಪೂರ್ಣ ವಿಚಾರ ಹೈಕಮಾಂಡ್ ಗಮನಕ್ಕೆ ಬಂದಿದೆ. ಈ ಸಮಸ್ಯೆಯನ್ನು ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಬಗೆಹರಿಸಲಿದ್ದಾರೆ ಎಂದು ಹೇಳಿದರು.
ದೆಹಲಿಯಲ್ಲಿ ಕಾಂಗ್ರೆಸ್ ನಾಯಕರ ಮನವೊಲಿಕೆ, ಪೆರೇಡ್ ಅಥವಾ ಶಕ್ತಿಪ್ರದರ್ಶನ ನಡೆಯುತ್ತಿದೆ ಎಂಬ ವಿಚಾರಕ್ಕೆ ಸ್ಪಷ್ಟನೆ ನೀಡಿದ ಹರಿಪ್ರಸಾದ್, ಹೈಕಮಾಂಡ್ ಮುಂದೆ ಯಾವ ಪೆರೇಡ್ ಇಲ್ಲ, ಯಾವುದೂ ಆಗುತ್ತಿಲ್ಲ. ಅದು ಮಾಧ್ಯಮಗಳ ಕಲ್ಪನೆ ಎಂದು ಹೇಳಿದರು.
ಸಿಎಂ ಸ್ಥಾನ ಹಂಚಿಕೆ ಕುರಿತು ಸ್ವಾಮೀಜಿಗಳ ಹೇಳಿಕೆಯ ಬಗ್ಗೆ ಕೇಳಿದಾಗ, ಸ್ವಾಮೀಜಿಗಳು ಎಂಟ್ರಿ ಆಗಲಿ, ಅದರ ಬಗ್ಗೆ ಮಾತನಾಡುವುದಕ್ಕೆ ನಾನು ಸೂಕ್ತ ವ್ಯಕ್ತಿಯಲ್ಲ ಎಂದು ಪ್ರತಿಕ್ರಿಯಿಸಿದರು.



