ಹಾವೇರಿ: ರಾಜ್ಯ ಸರ್ಕಾರ ತನ್ನ ಬೊಕ್ಕಸದ ಹಣ ತೆಗೆದು ನೇರವಾಗಿ ರೈತರಿಂದ ಎಂಎಸ್‌ಪಿ ದರದಲ್ಲಿ ಮೆಕ್ಕೆಜೋಳ ಖರೀದಿ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗಹಿಸಿದ್ದಾರೆ. ಇಂದು ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಶಿಗ್ಲಿ ಕ್ರಾಸ್ ನಲ್ಲಿ ಸಮಗ್ರ ರೈತ ಸಂಘಟನೆಗಳ ಒಕ್ಕೂಟ ಹಾಗೂ ಲಕ್ಷ್ಮೇಶ್ವರ ತಾಲೂಕು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ವತಿಯಿಂದ ಏರ್ಪಡಿಸಿದ ಕಿತ್ತೂರು ರಾಣಿ ಚೆನ್ನಮ್ಮಾಜಿ ಅವರ 201 ನೇಯ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮನುಷ್ಯ ಕೇವಲ ಭೋಗಿಸಲು ಇಲ್ಲ. ಮನುಷ್ಯ ತನ್ನ ಸ್ವಾಭಿಮಾನಕ್ಕಾಗಿ ತನ್ನ ಬದುಕಿನ ದಾರಿಗಾಗಿ ತನ್ನ ಅಸ್ತಿತ್ವಕ್ಕಾಗಿ ಹೋರಾಟ ಮಾಡಲು ಮನುಷ್ಯ ಇದ್ದಾನೆ ಎಂದು ತಾವು ತೋರಿಸಿಕೊಟ್ಟಿದ್ದೀರಿ, ಮನಸ್ಸಿನಲ್ಲಿ ಕೋಲಾಹಲವಿದೆ. ಯಾಕೆಂದರೆ ಇದೇ ವೇದಿಕೆಯಲ್ಲಿ ನಾನು ಒಂದು ವಾರದ ಹಿಂದೆ ಬಂದಿದ್ದೆ ಅವತ್ತು ರೈತರ ಆಕೋಶ ಉತ್ತುಂಗದಲ್ಲಿತ್ತು. ನಮ್ಮ ಕುಮಾರ ಅಜ್ಜನವರು ಅಮರಣಾಂತ ಉಪವಾಸ ಆರಂಭಿಸಿದ್ದರು. ಆಗ ಸರ್ಕಾರಿ ಅಧಿಕಾರಿಗಳು ಬಂದು ಮೆಕ್ಕೆಜೋಳ ಖರೀದಿ ಆರಂಭಿಸುತ್ತೇವೆ ಎಂದು ಭರವಸೆ ಕೊಟ್ಟು ಹೋದರು.
ಆದರೂ, ನಮ್ಮ ರೈತರು ಬುದ್ದಿವಂತರಿದ್ದಾರೆ. ಖರೀದಿ ಕೇಂದ್ರ ತೆರೆದು ನಮ್ಮ ಗೋವಿನ ಜೋಳ ಮಾರಾಟವಾದ ಮೇಲೆ ನಮ್ಮ ಹೋರಾಟ ನಿಲ್ಲಿಸುತ್ತೇವೆ ಎಂದು ಹೇಳಿದ್ದೀರಿ, ಸ್ವಾಮೀಜಿಗೆ ಸುಳ್ಳು ಹೇಳಿ, ಬೆಂಗಳೂರಿನಲ್ಲಿ ಸಭೆ ಮಾಡಿ 10 ಲಕ್ಷ ಮೆಟ್ರಿಕ್ ಟನ್ ಖರೀದಿ ಮಾಡುತ್ತೇವೆ ಎಂದು ಆದೇಶ ಮಾಡಿ ಹತ್ತು ದಿನವಾಯಿತು. ರಾಜ್ಯದ ಯಾವುದೇ ಮೂಲೆಯಲ್ಲಿ ಖರೀದಿ ಕೇಂದ್ರ ತೆರೆದಿಲ್ಲ.
ಯಾವ ಏಜೆನ್ಸಿಗೆ ಖರೀದಿಗೆ ಕೊಡುತ್ತೇವೆ ಎಂದು ಹೇಳಿಲ್ಲ. ಮಾರ್ಕೆಂಟಿಂಗ್ ಫೆಡರೇಷನ್ನವರು ದುಡ್ಡು ಕೊಟ್ಟರೆ ಖರೀದಿಸುತ್ತೇವೆ ಎಂದು ಹೇಳಿದ್ದಾರೆ. ಈ ಸರ್ಕಾರದ ಬಳಿ ಹಣ ಇಲ್ಲ. ಸಾಹುಕಾರನ ಬಂಡವಾಳ ಆತ ಇಲ್ಲದಾಗ ಗೊತ್ತಾಗುತ್ತದೆ. ಈ ಸರ್ಕಾರ ಎಷ್ಟು ಬೇಗ ಹೋಗುತ್ತದೆ ಅಷ್ಟು ಬೇಗ ರೈತರಿಗೆ ಅನುಕೂಲವಾಗುತ್ತದೆ. ರೈತ ಯಾವುದೇ ಪಕ್ಷಕ್ಕೆ ಸೇರಿಲ್ಲ. ನಾವು ಯಾವಾಗಲೂ ರೈತರ ಪರ ಹೋರಾಟವನ್ನು ನಿರಂತರ ಮಾಡುತ್ತ ಬಂದಿದ್ದೇವೆ. ರಾಜ್ಯ ಸರ್ಕಾರಕ್ಕೆ ಸೂಕ್ಷ್ಮತೆ ಇದ್ದರೆ ಸಂದಿಸುತ್ತಿತ್ತು. ಇದರ ಚರ್ಮ ಬಹಳ ದಪ್ಪ ಇದೆ. ನೀವು ಅಮರಣಾಂತ ಉಪವಾಸ ಮಾಡಿದ್ದೀರಿ, ನಾಲ್ಕು ದಿನ ಬೇರೆ ರೀತಿಯಲ್ಲಿ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡೋಣ ಎಂದು ಮನವಿ ಮಾಡಿದರು.



