ಬೆಳಗಾವಿ: ಗಂಡನ ಮನೆಯವರಿಂದ ನಿರಂತರವಾಗಿ ನಡೆದಿದ್ದ ಮಾನಸಿಕ ಮತ್ತು ದೈಹಿಕ ಕಿರುಕುಳದ ಆರೋಪದ ನಡುವೆ ಮಹಿಳೆಯೊಬ್ಬರು ತಮ್ಮ ಮೂರು ವರ್ಷದ ಮಗನೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಬೆಳಗಾವಿಯ ಪೀರನವಾಡಿಯಲ್ಲಿ ನಡೆದಿದೆ.
ಪ್ರೇಮಾ ನಾಗೇಶ ತಳವಾರ (28) ಮತ್ತು ಪುತ್ರ ಭುವನ (3) ಮೃತರು. ಪೀರನವಾಡಿಯ ಪಾಟೀಲ್ ಗಲ್ಲಿಯಲ್ಲಿರುವ ಮನೆಯಲ್ಲಿ ತಾಯಿ-ಮಗ ಇಬ್ಬರೂ ಸೀರೆಯಿಂದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ತನಿಖೆಯ ಪ್ರಾಥಮಿಕ ಮಾಹಿತಿಯಂತೆ, ಗಂಡನ ಮನೆಯವರು ಮಾಡಿಕೊಂಡಿದ್ದ ಸಾಲವನ್ನು ತೀರಿಸುವಂತೆ ಪ್ರೇಮಾ ಅವರ ಮೇಲೆ ನಿರಂತರ ಒತ್ತಡ ಹೇರಲಾಗುತ್ತಿತ್ತು. ಇದೇ ವಿಚಾರವಾಗಿ ಪತಿ ಸೇರಿದಂತೆ ಕುಟುಂಬದ ಸದಸ್ಯರು ದಿನನಿತ್ಯ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಈ ಕಿರುಕುಳವೇ ಆತ್ಮಹತ್ಯೆಗೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಘಟನೆಯ ಬಳಿಕ ಮೃತೆಯ ಕುಟುಂಬಸ್ಥರು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಪತಿ ನಾಗೇಶ ತಳವಾರ, ಅತ್ತೆ ಸುಶೀಲಾ ತಳವಾರ, ಮೈದುನ ಪರಶುರಾಮ ತಳವಾರ, ನಾದಿನಿ ಸಂಗೀತಾ ತಳವಾರ, ಮರೇವ್ವಾ ತಳವಾರ ಹಾಗೂ ಶಾರದಾ ಕಲಕಾಂವಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಮೃತದೇಹಗಳನ್ನು ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಆತ್ಮಹತ್ಯೆಗೆ ನಿಖರ ಕಾರಣ ಹಾಗೂ ಕಿರುಕುಳದ ಆರೋಪಗಳ ಕುರಿತು ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು ಸವಿಸ್ತಾರ ತನಿಖೆ ನಡೆಸುತ್ತಿದ್ದಾರೆ.



