ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ: ಕನ್ನಡ ಎಂಬ ಮೂರಕ್ಷರದಲ್ಲಿ ವೈಭವದ ಸೊಗಡು ಅಡಗಿದೆ ಎಂದು ಹೊಸಪೇಟೆಯ ಬಿಡಿಸಿಸಿ ಬ್ಯಾಂಕ್ ನಿರ್ದೆಶಕ ವೈ.ಡಿ. ಅಣ್ಣಪ್ಪ ಹೇಳಿದರು.
ತಾಲೂಕಿನ ತೆಲಿಗಿ ಗ್ರಾಮದ ಆಲಗಿಲವಾಡ ಪಾಟೀಲ್ ವಿರೂಪಾಕ್ಷಪ್ಪ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಕನ್ನಡ ಮನಸುಗಳ ಒಕ್ಕೂಟ, ಕರ್ನಾಟಕ ರಕ್ಷಣಾ ವೇದಿಕೆ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ತೆಲಿಗಿ ಹೋಬಳಿ ಘಟಕ ಇವರ ಸಹಯೋಗದಲ್ಲಿ 70ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಕನ್ನಡ ನುಡಿ ಕಲರವ ಹಾಗೂ ಸಾಂಸ್ಕೃತಿಕ ಸಂಗೀತ ಕಲಾ ವೈಭವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕನ್ನಡದ ಭುವಿಯ ಅಂತರಂಗದಲ್ಲಿ ಅಪಾರ ಖನಿಜ ಸಂಪತ್ತು ಅಡಗಿದೆ. ಕರಾವಳಿ ತೀರ, ನದಿಗಳು, ವಿವಿಧ ಜಾನಪದ ಶೈಲಿ, ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಪಯಣಿಸಿದಂತೆ ವಿಭಿನ್ನ ಭಾಷಾ ಸೊಗಡು, ಆಹಾರ-ವಿಹಾರ, ಜನರ ಸಂಸ್ಕೃತಿ, ಅದರಲ್ಲೂ ಗ್ರಾಮೀಣ ಜನರ ಜೀವನ ಅದ್ಭುತವಾಗಿದೆ ಎಂದರು.
ದಾವಣಗೆರೆ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಸ್. ವೀರಭದ್ರಪ್ಪ ಮಾತನಾಡಿ, ರಾಷ್ಟ್ರ ಭಾಷೆಗಳಿಗೆ ಕೊಡುವಂತಹ ಜ್ಞಾನಪೀಠ ಪ್ರಶಸ್ತಿಗಳಲ್ಲಿ ಕನ್ನಡಕ್ಕೆ ಅತಿ ಹೆಚ್ಚಿನ ಸ್ಥಾನ ದೊರಕಿದೆ. ಎಂಟು ಜ್ಞಾನಪೀಠ ಪ್ರಶಸ್ತಿಗಳು ಸಂದಿರುವುದು ಒಂದು ದಾಖಲೆಯೇ ಸರಿ. ಭಾರತ ಸ್ವಾತಂತ್ರ್ಯ ಪಡೆಯುವಲ್ಲಿ ಕನ್ನಡ ನೆಲದಲ್ಲಿ ಹುಟ್ಟಿದ ಅನೇಕ ವೀರ ಹೋರಾಟಗಾರರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು.
ತೆಲಿಗಿಯ ಜಡೇಸ್ವಾಮಿ ಮಠದ ಶ್ರೀ ಕಿಡಿಗಣ್ಣಯ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಗ್ರಾ. ಪಂ. ಅಧ್ಯಕ್ಷರಾದ ಕಾಳಮ್ಮ ಬಾರೀಕರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ. ಉಚ್ಚೆಂಗೆಪ್ಪ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ತಾಲೂಕು ಅಧಿಕಾರಿ ಸುಬ್ರಹ್ಮಣ್ಯ, ತಳವಾರ ಅಂಜಿನಪ್ಪ, ಸಾಮಾಜಿಕ ಕಾರ್ಯಕರ್ತ ಗುಂಡಿ ಮಂಜುನಾಥ, ಕರ್ನಾಟಕ ರಾಜ್ಯ ರೈತ ಸಂಘದ ತೆಲಿಗಿ ಹೋಬಳಿ ಘಟಕದ ಅಧ್ಯಕ್ಷ ತಳವಾರ ನಾಗರಾಜ, ಜ್ಯೂನಿಯರ್ ಅಂಬರೀಶ್, ಕೆಎಸ್ಆರ್ಟಿಸಿ ನಿವೃತ್ತ ನೌಕರರಾದ ಎಸ್. ಶಿವಣ್ಣ, ಪೊಲೀಸ್ ಇಲಾಖೆಯ ವಿಠಲ್, ಕರಿಬಸಪ್ಪ ಸೇರಿದಂತೆ ಇತರರು ಇದ್ದರು.
ನೀಲಗುಂದದ ಗುಡ್ಡದ ವಿರಕ್ತಮಠದ ಶ್ರೀ ಚನ್ನಬಸವ ಶಿವಯೋಗಿಗಳು ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿ, ಕನ್ನಡ ಪರವಾಗಿ ಸಾಕಷ್ಟು ಜನರು ಸೇವೆ ಮಾಡಿದ್ದಾರೆ. ದೇಶಕ್ಕಾಗಿ ಸೇವೆ ಮಾಡುವ ಮನೋಭಾವನೆ ಬೆಳೆಸಿಕೊಳ್ಳಬೇಕು. ಯುವಕರು ದೇಶದ ಅಸ್ತಿಯಾಗಿದ್ದು, ಕನ್ನಡದಲ್ಲಿ ಹೊಸ ಹೊಸ ತಂತ್ರಜ್ಞಾನ ಸಾಧನೆ ಹೊರಬರುತ್ತಿದೆ. ಇದು ಕನ್ನಡ ಮತ್ತಷ್ಟು ಬೆಳೆಯಲು ಆಧಾರವಾಗಿದೆ. ಕನ್ನಡಾಂಬೆಯ ಬಾವುಟ ಎತ್ತರಕ್ಕೆ ಸಾಗುತ್ತಿದೆ ಎಂದರು.



