ಗದಗ: ಜಸ್ಟ್ ನೀರು ಕೇಳಿದ್ದಕ್ಕೆ ಕಿಡಿಗೇಡಿಗಳ ಗುಂಪೊಂದು ಯುವಕರ ಮೇಲೆ ಹಲ್ಲೆ ನಡೆಸಿದ್ದು, ಅದರಲ್ಲಿ ಓರ್ವನಿಗೆ ಹರಿತವಾದ ವಸ್ತುವಿನಿಂದ ಇರಿದಿರುವ ಘಟನೆ ಗದಗ ನಗರದಲ್ಲಿ ಜರುಗಿದೆ.
ಘಟನೆಯಲ್ಲಿ ಅಸ್ಲಾಂ ಮುಳಗುಂದ ಎಂಬ ಯುವಕನಿಗೆ ಹರಿತವಾದ ವಸ್ತುವಿನಿಂದ ಇರಿದ ಪರಿಣಾಮ ಗಂಭೀರ ಗಾಯಗೊಂಡು ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ಇನ್ನೊಬ್ಬ ವಿಜಯಕುಮಾರ್ ಗೆ ಸಣ್ಣಪುಟ್ಟ ಗಾಯಗಳಾಗಿವೆ.
ಆರೋಪಿಗಳನ್ನು ಈಶ್ವರ ಬಡಾವಣೆಯ ಮಲ್ಲು ಬದಾಮಿ, ಹಾತಲಗೇರಿ ನಾಕಾದ ಆಶೀಫ್ ಧಾರುವಾಲ, ಖಾನತೋಟ ನಿವಾಸಿ ಸಿದ್ದು ಹಳ್ಳದ, ಸೂರ್ಯ ನಗರದ ನಿವಾಸಿ ರೋಹಿತ್ ಮಳಗಿ, ಹಮಾಲರ ಪ್ಲಾಟ್ ನ ಕಿರಣ ಕೋರಿ, ಈಶ್ವರ ಬಡಾವಣೆಯ ಮಲ್ಲಿಕಾರ್ಜುನ ಮಲ್ಲಣ್ಣವರ ಎಂದು ಗುರುತಿಸಲಾಗಿದೆ.
ಘಟನೆ ವಿವರ:-
ಬೆಟಗೇರಿ ನಿವಾಸಿಗಳಾದ ವಿಜಯಕುಮಾರ ಸವಣೂರ (26), ಅಸ್ಲಾಂ ಮುಳಗುಂದ (27) ಮತ್ತು ಸದ್ದಾಮ್ (30) ಶನಿವಾರ ರಾತ್ರಿ 9:40ರ ವೇಳೆ ಗದಗ–ಹಾತಲಗೇರಿ ರಸ್ತೆಯ ಹತ್ತಿರದ ಲೇಔಟ್‌ವೊಂದರಲ್ಲಿ ಊಟ ಮಾಡುತ್ತಿದ್ದರು. ಅವರ ಬಳಿಯಿದ್ದ ನೀರಿನ ಬಾಟಲಿ ಖಾಲಿಯಾಗಿದ್ದ ಕಾರಣ ಸಮೀಪದಲ್ಲಿ ಪಾರ್ಟಿ ಮಾಡುತ್ತಿದ್ದ ಆರೋಪಿಗಳಿಂದ ನೀರು ಕೇಳಿದ್ದಾರೆ.
ಈ ವೇಳೆ ಆರೋಪಿಗಳು, ಯುವಕರನ್ನು ಅವಾಚ್ಯವಾಗಿ ನಿಂದಿಸಿ ವಿಜಯಕುಮಾರ ಮತ್ತು ಅಸ್ಲಾಂ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಬಿಡಿಸಲು ಬಂದ ಸದ್ದಾಮ್ ಮೇಲೂ ಹಲ್ಲೆ ಮಾಡಿದರು. ದಾಳಿಯ ವೇಳೆ ಆರೋಪಿಗಳಲ್ಲಿ ಒಬ್ಬನು ಹರಿತವಾದ ಆಯುಧದಿಂದ ಅಸ್ಲಾಂ ಅವರ ಹೊಟ್ಟೆಗೆ ಇರಿದು ಗಂಭೀರ ಗಾಯಗೊಳಿಸಿದ್ದಾನೆ.
ಈ ಸಂದರ್ಭದಲ್ಲಿ ವಿಜಯಕುಮಾರ್‌ಗೂ ಗಾಯವಾಗಿದೆ. ನಂತರ ವಿಜಯಕುಮಾರ ಮತ್ತು ಸದ್ದಾಮ್ ಸ್ಥಳದಿಂದ ಓಡಿ, ನೇರವಾಗಿ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ದೂರಿನ ಅನ್ವಯ ಆರೋಪಿಗಳ ವಿರುದ್ಧ ಪಿಎಸ್ಐ ಮಾರುತಿ ಜೋಗದಂಡಕರ್ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.



