ಬೆಂಗಳೂರು: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ದಾಖಲಾಗಿರುವ ಪೋಕ್ಸೊ ಪ್ರಕರಣವನ್ನು ರದ್ದುಗೊಳಿಸುವ ಮನವಿಯನ್ನು ಕರ್ನಾಟಕ ಹೈಕೋರ್ಟ್ ಗುರುವಾರ ತಿರಸ್ಕರಿಸಿತ್ತು. ಹೈಕೋರ್ಟ್ ಆದೇಶದ ಪ್ರಕಾರ, ಯಡಿಯೂರಪ್ಪ ಇಂದು ಕೆಳಹಂತದ ಕೋರ್ಟ್‌ಗೆ ಖುದ್ದಾಗಿ ಹಾಜರಾಗಬೇಕಾಗಿತ್ತು.
ಆದ್ರೆ, ಯಡಿಯೂರಪ್ಪ ಪರ ವಕೀಲರು ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿರುವುದಾಗಿ ತಿಳಿದುಬಂದಿದೆ. ಸಮನ್ಸ್ ಅನ್ನು ರದ್ದುಪಡಿಸುವಂತೆ ಯಡಿಯೂರಪ್ಪ ಹಾಗೂ ಇತರ ಆರೋಪಿಗಳು ಹಿಂದೆ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ ವಿಚಾರಣೆ ನಡೆಸಿದ ಹೈಕೋರ್ಟ್ ಅರ್ಜಿಯನ್ನು ವಜಾಗೊಳಿಸಿ, ಟ್ರಯಲ್ ಮುಂದುವರೆಸಲು ಅವಕಾಶ ನೀಡಿತ್ತು.
ಹೈಕೋರ್ಟ್ ಆದೇಶದ ವಿರುದ್ಧ ಈಗ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿರುವ ಆರೋಪಿಗಳು, ಪ್ರಕರಣದ ಮೇಲೆ ತಾತ್ಕಾಲಿಕ ನಿರ್ಬಂಧ ಅಥವಾ ಪರಿಹಾರ ನಿರೀಕ್ಷೆಯಲ್ಲಿ ಇದ್ದಾರೆ ಎನ್ನಲಾಗಿದೆ. ಯಡಿಯೂರಪ್ಪ ಇಂದು ಕೋರ್ಟ್‌ಗೆ ಹಾಜರಾಗಬೇಕಿದ್ದಿದ್ದರೂ, ಇದೇ ದಿನ ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವುದರಿಂದ, ಮೇಲ್ಮನವಿ ವಿಚಾರಣೆ ಶೀಘ್ರ ನಿಗದಿಯಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಏನಿದು ಪ್ರಕರಣ?
ಬೆಂಗಳೂರಿನ ಡಾಲರ್ಸ್ ಕಾಲೋನಿಯ ತಮ್ಮ ನಿವಾಸದಲ್ಲಿ 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಬಿಎಸ್‌ವೈ ಮೇಲಿದೆ. ಸಹಾಯ ಕೇಳಿ ಬಂದಾಗ ಯಡಿಯೂರಪ್ಪನವರು ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಮಾರ್ಚ್ 2024ರಲ್ಲಿ ಬಾಲಕಿಯ ತಾಯಿ ದೂರು ನೀಡಿದ್ದರು.


