ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಮನುಷ್ಯನಿಗೆ ಬದುಕಲು ಹಣಕ್ಕಿಂತ ಮುಖ್ಯವಾಗಿರುವುದು ಅನ್ನ, ಅಕ್ಷರ. ಅಕ್ಷರವನ್ನು ಸಂಪಾದಿಸಿದರೆ ಅನ್ನ ತಾನಾಗೇ ಸಿಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ವಿದ್ಯೆ ಸಂಪಾದನೆಗೆ ಹೆಚ್ಚಿನ ಗಮನ ನೀಡಬೇಕೆಂದು ಹಾಲಕೆರೆ ಸಂಸ್ಥಾನದ ಪೀಠಾಧಿಪತಿ ಶ್ರೀ ಮುಪ್ಪಿನ ಬಸವಲಿಂಗ ಸ್ವಾಮೀಜಿ ಹೇಳಿದರು.
ಪಟ್ಟಣದ ಶ್ರೀ ಅನ್ನದಾನೇಶ್ವರ ಮಂಟಪದಲ್ಲಿ ಜರುಗಿದ 68ನೇ ಶಿವಾನುಭವಗೋಷ್ಠಿಯ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಈ ಬದುಕು ಕ್ಷಣಿಕ ಮತ್ತು ನಶ್ವರ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೂ ನಾವು ಈ ಬದುಕಿನಲ್ಲಿ ಮಾಡಬಾರದ ಅನೇಕ ಕೆಲಸಗಳನ್ನು ಮಾಡಿ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಮುಂದಾಗುತ್ತೇವೆ. ಇಂತಹ ಗುಣಗಳನ್ನು ನಾವು ಒಮ್ಮೆ ಬೆಳೆಸಿಕೊಂಡರೆ ನಂತರ ಅದರಿಂದ ಹೊರ ಬರುವುದು ತುಂಬಾ ದುಸ್ತರವಾಗುತ್ತದೆ. ಆದ್ದರಿಂದ ನೀವು ಇಂತಹ ಗುಣಗಳಿಂದ, ದುರ್ಜನರಿಂದ, ದುಶ್ಚಟಗಳಿಂದ, ದುಷ್ಟ ವಿಚಾರಗಳಿಂದ ದೂರವಿರಬೇಕು. ಇದೆಲ್ಲವನ್ನೂ ನಿಮಗೆ ತಿಳಿಸುವುದಕ್ಕಾಗಿಯೇ ಈ ಶಿವಾನುಭವಗೋಷ್ಠಿಯನ್ನು ಏರ್ಪಡಿಸಲಾಗುತ್ತಿದೆ ಎಂದರು.
ಪ್ರಾಧ್ಯಾಪಕ ಡಿ.ಎಲ್. ಪವಾರ ಮಾತನಾಡಿ, ಸಂವಿಧಾನ ನಮಗೆ ಹಕ್ಕುಗಳ ಜೊತೆಗೆ ಕರ್ತವ್ಯಗಳನ್ನೂ ನೀಡಿದೆ. ಹಕ್ಕುಗಳಿಗಾಗಿ ಹೋರಾಡುವ ನಾವು ಕರ್ತವ್ಯಗಳನ್ನು ಸಮರ್ಪಕವಾಗಿ ಮಾಡಲು ಮುಂದಾಗಬೇಕು. ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ್ ರಚಿಸಿದ ಸಂವಿಧಾನಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ವಿದ್ಯಾರ್ಥಿನಿ ಶಿವಲೀಲಾ ಸೋಮಗೊಂಡ ಕರ್ನಾಟಕದ ಇತಿಹಾಸವನ್ನು ಸ್ಮರಿಸಿಕೊಂಡು ಪಂಪ-ರನ್ನ-ಪೊನ್ನ-ಜನ್ನರಿಂದ ಹಿಡಿದು ಇಂದಿನ ಆಧುನಿಕ ಕವಿಗಳು ಕನ್ನಡವನ್ನು ಹೇಗೆ ಬೆಳೆಸಿದ್ದಾರೆ, ಕನ್ನಡ ನಾಡಿನಲ್ಲಿರುವ ಸೃಷ್ಟಿ ಸೌಂದರ್ಯದ ಬಗ್ಗೆ ಅನೇಕ ಉದಾಹರಣೆಗಳ ಮೂಲಕ ವಿವರಿಸಿದಳು.
ವಿದ್ಯಾರ್ಥಿನಿ ರೇಣುಕಾ ಕುಪನಿ ಸತ್ಯಕ್ಕ, ಲದ್ದೆ ಸೋಮಣ್ಣ ಮತ್ತು ಮೋಳಿಗೆ ಮಾರಯ್ಯನವರ ವಚನಗಳ ವಿಶ್ಲೇಷಣೆ ಮಾಡಿದಳು. ಡಾ. ಕಲ್ಲಯ್ಯ ಹಿರೇಮಠ ಸ್ವಾಗತಿಸಿದರು. ಶಿಕ್ಷಕ ಒಂಟೆಲಿ ನಿರೂಪಿಸಿದರು. ಮುಖ್ಯ ಶಿಕ್ಷಕ ಸಂಗಮೇಶ ಹೂಲಗೇರಿ ವಂದಿಸಿದರು.



