HomeGadag Newsಉಚಿತ ಭಾಗ್ಯಗಳು ರಾಜ್ಯಕ್ಕೆ ಹೊರೆಯಾಗುತ್ತಿವೆ: ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು

ಉಚಿತ ಭಾಗ್ಯಗಳು ರಾಜ್ಯಕ್ಕೆ ಹೊರೆಯಾಗುತ್ತಿವೆ: ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯ ಸರ್ಕಾರದ ಉಚಿತ ಗ್ಯಾರಂಟಿ ಯೋಜನೆಗಳ ವಿರುದ್ಧ ಕಾಶೀ ಜಂಗಮವಾಡಿ ಮಠದ ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ತೀವ್ರ ಕಳವಳ ವ್ಯಕ್ತಪಡಿಸಿದ್ದು, “ಉಚಿತ ಗ್ಯಾರಂಟಿ ಭಾಗ್ಯಗಳನ್ನು ನಿಲ್ಲಿಸಿ, ರೈತರ ಬೆಳೆಗೆ ನ್ಯಾಯಯುತ ಬೆಲೆ ಹಾಗೂ ಯುವಕರಿಗೆ ಉದ್ಯೋಗ ನೀಡಿ. ರಾಜ್ಯದ ಅಭಿವೃದ್ಧಿಗೆ ಆದ್ಯತೆ ನೀಡಬೇಕು” ಎಂದು ಅಭಿಪ್ರಾಯಪಟ್ಟರು.

ನಗರದ ಮಾಂಗಲ್ಯ ಮಂದಿರದಲ್ಲಿ ಗದಗ-ಬೆಟಗೇರಿ ಪಂಚಾಚಾರ್ಯ ಸೇವಾ ಸಂಘ ಆಯೋಜಿಸಿದ್ದ ಆಷಾಢ ಮಾಸದ ‘ಶ್ರೀ ಸಿದ್ಧಾಂತ ಶಿಖಾಮಣಿ’ ಆಧ್ಯಾತ್ಮಿಕ ಪ್ರವಚನ ಮಾಲಿಕೆಯಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಉಚಿತ ಯೋಜನೆಗಳಿಂದ ರಾಜ್ಯದ ಆರ್ಥಿಕ ಪರಿಸ್ಥಿತಿಯ ಮೇಲೆ ಭಾರೀ ಒತ್ತಡ ಉಂಟಾಗುತ್ತಿದೆ ಎಂದು ಹೇಳಿದ ಅವರು, “ಇಂದು ಕರ್ನಾಟಕದ ಮೇಲೆ ಲಕ್ಷಾಂತರ ಕೋಟಿ ರೂಪಾಯಿ ಸಾಲವಿದೆ. ಈ ಸಾಲ ತೀರಿಸಲು ತೆರಿಗೆ ಹಾಗೂ ವಿವಿಧ ಶುಲ್ಕಗಳನ್ನು ಹೆಚ್ಚಿಸುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಅದರ ಹೊರೆ ಅಂತಿಮವಾಗಿ ಜನರ ಮೇಲೇ ಬೀಳುತ್ತದೆ” ಎಂದು ಎಚ್ಚರಿಸಿದರು.

“ರೈತರಿಗೆ ಉಚಿತ ಯೋಜನೆಗಳ ಅಗತ್ಯವಿಲ್ಲ. ಅವರು ಬೆಳೆದ ಬೆಳೆಗೆ ನ್ಯಾಯಯುತ ಬೆಲೆ ಹಾಗೂ ಕೃಷಿ ಅಭಿವೃದ್ಧಿಗೆ ಅಗತ್ಯ ನೆರವು ನೀಡಿದರೆ ಸಾಕು. ಗ್ಯಾರಂಟಿ ಹಣದಿಂದ ಮನೆ ನಡೆಯುವುದಿಲ್ಲ. ಸರ್ಕಾರ ಉಚಿತ ಯೋಜನೆಗಳಿಗಿಂತ ಉದ್ಯೋಗ ಸೃಷ್ಟಿ ಹಾಗೂ ಅಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು” ಎಂದು ಹೇಳಿದರು.

ಮಳೆ ಕೊರತೆಯಿಂದ ರೈತರು ಸಂಕಷ್ಟದಲ್ಲಿದ್ದು, ವಿದ್ಯಾವಂತ ಯುವಕರು ಉದ್ಯೋಗವಿಲ್ಲದೆ ನಿರುದ್ಯೋಗಿಗಳಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರ ಮೂಲಭೂತ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಬೇಕು ಎಂದರು.

ಜನರ ಹಿತದೃಷ್ಟಿಯಿಂದ ಸರ್ಕಾರದ ತಪ್ಪು ನಿರ್ಧಾರಗಳ ಬಗ್ಗೆ ಮಾರ್ಗದರ್ಶನ ನೀಡುವುದು ಧರ್ಮಗುರುಗಳ ಜವಾಬ್ದಾರಿ ಎಂದು ಹೇಳಿದ ಶ್ರೀಗಳು, ಆಡಳಿತ ನಡೆಸುವ ಯಾವುದೇ ಪಕ್ಷ ಜನರ ಹಿತ ಕಾಪಾಡುವ ಕೆಲಸ ಮಾಡಬೇಕು. ಸರ್ಕಾರ ಸಾಲದ ಸುಳಿಗೆ ಸಿಲುಕದಂತೆ ಅಭಿವೃದ್ಧಿ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಿಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ತಾವು ಮೂಲತಃ ರೈತನ ಮಗ ಎಂದು ಹೇಳಿದ ಶ್ರೀಗಳು, ಸೊಲ್ಲಾಪುರದ ಬೃಹನ್ಮಠಕ್ಕೆ ಸೇರಿದ ಸುಮಾರು 200 ಎಕರೆ ಜಮೀನಿನಲ್ಲಿ ಸ್ವತಃ ಕೃಷಿ ಕೆಲಸ ಮಾಡಿದ ಅನುಭವ ಹಂಚಿಕೊಂಡರು. “ಹೊಲದಲ್ಲಿ ದುಡಿದಾಗಲೇ ರೈತನ ಶ್ರಮದ ಅರಿವಾಗುತ್ತದೆ” ಎಂದು ಹೇಳಿದರು.

ರೈತರು ಏಕಬೆಳೆ ಪದ್ಧತಿಯನ್ನು ಅವಲಂಬಿಸದೆ ಬಹುಬೆಳೆ ಪದ್ಧತಿ ಹಾಗೂ ಮೌಲ್ಯವರ್ಧಿತ ಕೃಷಿಯತ್ತ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ಸಂಸ್ಕಾರದ ಮಹತ್ವವನ್ನು ವಿವರಿಸಿದ ಅವರು, “ಕಾನೂನು ಎಲ್ಲರಿಗೂ ಸಮಾನವಾಗಿರಬೇಕು. ಪ್ರತಿಯೊಂದು ಕುಟುಂಬವೂ ಕನಿಷ್ಠ ಮೂರು ಮಕ್ಕಳನ್ನು ಹೊಂದಬೇಕು – ಒಂದು ಮನೆತನಕ್ಕೆ, ಒಂದು ದೇಶಕ್ಕೆ ಮತ್ತು ಒಂದು ಧರ್ಮ ರಕ್ಷಣೆಗೆ” ಎಂದು ಕರೆ ನೀಡಿದರು.

ಯುವಕರ ದೈಹಿಕ ಸಾಮರ್ಥ್ಯ ಕುಸಿಯುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಸಮತೋಲನ ಆಹಾರ, ದೈಹಿಕ ಶ್ರಮ ಹಾಗೂ ದುಶ್ಚಟಗಳಿಂದ ದೂರವಿರುವ ಮೂಲಕ ಸದೃಢ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

“ಗ್ಯಾರಂಟಿ ಯೋಜನೆಗಳಿಂದ ಬದುಕು ಕಟ್ಟಲಾಗುವುದಿಲ್ಲ. ರೈತನ ಬೆಳೆಗೆ ನ್ಯಾಯಯುತ ಬೆಲೆ ನೀಡಿ, ಯುವಕರಿಗೆ ಉದ್ಯೋಗ ಕೊಡಿ. ಉಚಿತ ಭಾಗ್ಯಗಳಿಗಿಂತ ರಾಜ್ಯದ ಅಭಿವೃದ್ಧಿಗೆ ಆದ್ಯತೆ ನೀಡಬೇಕು.”

– ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img