ಚೆನ್ನೈ: ದಳಪತಿ ವಿಜಯ್ ಅವರ ಸಿನಿ ಪಯಣದ ಕೊನೆಯ ಅಧ್ಯಾಯವೆಂದು ಬಣ್ಣಿಸಲಾಗುತ್ತಿರುವ ‘ಜನ ನಾಯಗನ್’ ಸಿನಿಮಾ ಬಿಡುಗಡೆಯ ಕ್ಷಣಗಣನೆ ಆರಂಭವಾಗಿದೆ. ಜುಲೈ 23ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿರುವ ಚಿತ್ರದ ಅನೌನ್ಸ್ಮೆಂಟ್ ಟೀಸರ್ ಬಿಡುಗಡೆಯಾಗುತ್ತಿದ್ದಂತೆಯೇ ಅಭಿಮಾನಿಗಳಲ್ಲಿ ಭಾರೀ ಸಂಭ್ರಮ ಮನೆ ಮಾಡಿದೆ.
ಕೆವಿಎನ್ ಪ್ರೊಡಕ್ಷನ್ಸ್ ಬಿಡುಗಡೆ ಮಾಡಿರುವ 18 ಸೆಕೆಂಡುಗಳ ಟೀಸರ್ನಲ್ಲಿ ವಿಜಯ್ ಆ್ಯಕ್ಷನ್ ಮೋಡ್ನಲ್ಲಿ ಮಿಂಚಿದ್ದು, ಗನ್ ಹಿಡಿದು ಖಳರ ವಿರುದ್ಧ ಹೋರಾಡುವ ದೃಶ್ಯಗಳು ಮತ್ತು ಪೊಲೀಸ್ ಪಡೆಯ ನಡುವೆ ಕಾಣಿಸಿಕೊಳ್ಳುವ ಸನ್ನಿವೇಶಗಳು ಗಮನ ಸೆಳೆಯುತ್ತವೆ. ಆದರೆ ಜೈಲು ಕೈದಿ ಉಡುಪಿನಿಂದ ನೇರವಾಗಿ ಮುಖ್ಯಮಂತ್ರಿಯ ಬಿಳಿ ಶರ್ಟ್–ಕಪ್ಪು ಜಾಕೆಟ್ ಲುಕ್ಗೆ ಬದಲಾಗುವ ದೃಶ್ಯವೇ ಟೀಸರ್ನ ಪ್ರಮುಖ ಆಕರ್ಷಣೆಯಾಗಿದೆ.
ತಮಿಳುನಾಡಿನ ಮುಖ್ಯಮಂತ್ರಿಯಾದ ಬಳಿಕ ಬಿಡುಗಡೆಯಾಗುತ್ತಿರುವ ವಿಜಯ್ ಅವರ ಮೊದಲ ಸಿನಿಮಾ ಎಂಬ ಕಾರಣಕ್ಕೆ ಚಿತ್ರದ ಮೇಲೆ ನಿರೀಕ್ಷೆ ಮತ್ತಷ್ಟು ಹೆಚ್ಚಿದೆ. “ಇದು ನಟ ವಿಜಯ್ಗೆ ಕೊನೆಯ ಸಲ್ಯೂಟ್”, “ಒನ್ ಲಾಸ್ಟ್ ಡ್ಯಾನ್ಸ್”, “ಬಾಕ್ಸ್ ಆಫೀಸ್ ದಾಖಲೆ ಮುರಿಯಲಿದೆ” ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾವನಾತ್ಮಕವಾಗಿ ಪ್ರತಿಕ್ರಿಯಿಸುತ್ತಿದ್ದಾರೆ.
ಹೆಚ್. ವಿನೋದ್ ನಿರ್ದೇಶನದ ಈ ಚಿತ್ರ ಹಲವು ಅಡೆತಡೆಗಳನ್ನು ದಾಟಿ ತೆರೆಗೆ ಬರುತ್ತಿದೆ. ಸಂಕ್ರಾಂತಿ ಬಿಡುಗಡೆ ಯೋಜನೆ ಸೆನ್ಸಾರ್ ಪ್ರಕ್ರಿಯೆಯಿಂದ ಮುಂದೂಡಲ್ಪಟ್ಟಿದ್ದು, ಬಳಿಕ ಕಾನೂನು ಹೋರಾಟದ ನಂತರ ‘ಎ’ ಪ್ರಮಾಣಪತ್ರ ಪಡೆದುಕೊಂಡಿದೆ. ಇದರ ಮಧ್ಯೆಯೇ ಚಿತ್ರದ ಎಚ್ಡಿ ಪ್ರಿಂಟ್ ಸೋರಿಕೆಯಾಗಿದ್ದ ಪ್ರಕರಣದಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು.
2023ರ ‘ಭಗವಂತ್ ಕೇಸರಿ’ ಚಿತ್ರದ ಭಾಗಶಃ ರಿಮೇಕ್ ಎನ್ನಲಾಗುತ್ತಿರುವ ‘ಜನ ನಾಯಗನ್’ ಚಿತ್ರದಲ್ಲಿ ವಿಜಯ್ ಜೊತೆಗೆ ಪೂಜಾ ಹೆಗ್ಡೆ, ಬಾಬಿ ಡಿಯೋಲ್, ಮಮಿತಾ ಬೈಜು, ಗೌತಮ್ ವಾಸುದೇವ್ ಮೆನನ್, ಪ್ರಕಾಶ್ ರಾಜ್ ಮತ್ತು ಪ್ರಿಯಾಮಣಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ವರ್ಷದ ಬಹು ನಿರೀಕ್ಷಿತ ಬಿಡುಗಡೆಯಾಗಿ ಗುರುತಿಸಿಕೊಂಡಿದೆ.



