ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಕೆರೆಗಳ ಪುನರುಜ್ಜೀವನಗೊಳಿಸುವ ಉದ್ದೇಶದಿಂದ ಕ್ಷೇತ್ರದಲ್ಲಿ ಹಲವಾರು ಕೆರೆಗಳ ಅಭಿವೃದ್ಧಿಗೆ ಅನುದಾನವನ್ನು ಬಿಡುಗಡೆಗೊಳಿಸಲಾಗಿದೆ. ಸಣ್ಣ ನೀರಾವರಿ ಇಲಾಖೆಯಿಂದ ಸುಮಾರು 18 ಲಕ್ಷ ರೂಗಳಲ್ಲಿ ಸೂರಣಗಿ ಗ್ರಾಮದಲ್ಲಿನ ಕೆರೆ ಅಭಿವೃದ್ಧಿಯನ್ನು ಕೈಗೊಳ್ಳಲಾಗುತ್ತಿದ್ದು, ಗುತ್ತಿಗೆದಾರರು ಸಮರ್ಪಕ ರೀತಿಯಲ್ಲಿ ಕಾಮಗಾರಿಯನ್ನು ನಿರ್ವಹಿಸುವ ಮೂಲಕ ಜನರಿಗೆ ಅನೂಕೂಲ ಕಲ್ಪಿಸಬೇಕೆಂದು ಶಾಸಕ ಡಾ. ಚಂದ್ರು ಲಮಾಣಿ ತಿಳಿಸಿದರು.
ಅವರು ತಾಲ್ಲೂಕಿನ ಸೂರಣಗಿ ಗ್ರಾಮದಲ್ಲಿ ಗುರುವಾರ ಸಣ್ಣ ನೀರಾವರಿ ಇಲಾಖೆಯಿಂದ ಸುಮಾರು 18 ಲಕ್ಷ ರೂಗಳ ವೆಚ್ಚದಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಜನರಿಗೆ ಕೆರೆ, ಹಳ್ಳಗಳು ನೀರಿಗೆ ಆಧಾರವಾಗಿರುತ್ತವೆ. ಇತ್ತೀಚಿನ ದಿನಗಳಲ್ಲಿ ಕೆರೆಗಳಲ್ಲಿ ಹೂಳು ತುಂಬಿಕೊಂಡು ನೀರು ನಿಲ್ಲದಂತಾಗುತ್ತಿದೆ. ಅಲ್ಲದೆ ಕೆರೆಗಳ ಬಗ್ಗೆ ಸರಿಯಾದ ಕಾಳಜಿ ಇಲ್ಲದಂತಾಗುತ್ತಿರುವುದರಿಂದ ನೀರಿನ ಮೂಲಗಳು ಕಡಿಮೆಯಾಗುತ್ತಿವೆ. ನೀರು ಅತ್ಯಮೂಲ್ಯವಾಗಿದ್ದು, ಅದನ್ನು ಸಂರಕ್ಷಿಸಬೇಕಾಗಿದ್ದು, ಅದಕ್ಕಾಗಿ ಗ್ರಾಮೀಣ ಭಾಗದಲ್ಲಿ ಇರುವ ಅನೇಕ ಕೆರೆಗಳ ಅಭಿವೃದ್ಧಿಗೆ ಕ್ರಮ ಕೈಗೊಂಡಿದ್ದೇವೆ. ಗ್ರಾಮಸ್ಥರು ಕೆರೆಯ ಸುತ್ತಮುತ್ತ ಗಲೀಜು ಮಾಡುವದು, ಕಸ ಹಾಕುವದು ಮಾಡಬಾರದು. ಇದನ್ನು ಸರಿಯಾಗಿ ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಗ್ರಾಮಸ್ಥರು ಆದ್ಯತೆ ನೀಡಿ, ದನ-ಕರುಗಳಿಗೆ, ಪಶು-ಪಕ್ಷಿಗಳಿಗೆ ಹಾಗೂ ಜನರಿಗೆ ಕೆರೆಗಳ ನೀರು ಸರಿಯಾಗಿ ದೊರಕುವಂತೆ ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಶಂಕ್ರಣ್ಣ ಶೀರನಹಳ್ಳಿ, ಸೋಮಣ್ಣ ದೊಡ್ಡಗಣ್ಣವರ, ವೀರೇಶ ಕಳ್ಳಿಹಾಳ, ಬಸವರಾಜ ಇಟಗಿ, ಪೀರಸಾಬ, ಕೃಷ್ಣ ಲಮಾಣಿ, ಲೋಕಪ್ಪ ಪೂಜಾರ, ಸಚಿನ್ ಮೇಲ್ಮುರಿ, ವೀರಭದ್ರಯ್ಯ ಮಠಪತಿ, ಪಿಡಿಓ ಗೌರಮ್ಮ ರೋಣದ, ನಿಂಗಪ್ಪ ಬನ್ನಿ, ನಾಗರಾಜ ಹಾವಳಕೇರಿ, ಸಂತೋಷ, ಗಂಗಾಧರ ಮೆಣಸಿನಕಾಯಿ, ಜಾನು ಲಮಾಣಿ, ನಾಗರಾಜ, ಕಾರ್ಯದರ್ಶಿ ಎಸ್.ಎಫ್. ಹಳ್ಯಾಳ, ಎಂಐಡಿಯ ಪ್ರವೀಣ ಪಾಟೀಲ ಮುಂತಾದವರಿದ್ದರು.



