ವಿಜಯಸಾಕ್ಷಿ ಸುದ್ದಿ, ಗದಗ: ಗೋಲ್‌ಗುಂಬಜ್ ಎಕ್ಸ್‌ಪ್ರೆಸ್ ಹಾಗೂ ವಿಜಯಪುರ–ಯಶವಂತಪುರ ರೈಲುಗಳನ್ನು ಗದಗ ಬೈಪಾಸ್ ಮಾರ್ಗದ ಬದಲು ಗದಗ ಮೇನ್ ಜಂಕ್ಷನ್ ಮೂಲಕವೇ ಸಂಚರಿಸಲು ಅವಕಾಶ ಕಲ್ಪಿಸಬೇಕು ಎಂದು ಗದಗ ಜಿಲ್ಲಾ ವಿಕಾಸ ವೇದಿಕೆ ಅಧ್ಯಕ್ಷ ವಿಶ್ವನಾಥ ಖಾನಾಪೂರ ರೈಲ್ವೆ ಇಲಾಖೆಗೆ ಆಗ್ರಹಿಸಿದ್ದಾರೆ.
ಈ ಕುರಿತು ಮನವಿ ಸಲ್ಲಿಸಿರುವ ಅವರು, ಟ್ರೇನ್ ನಂ.16535/36 ಗೋಲ್‌ಗುಂಬಜ್ ಎಕ್ಸ್‌ಪ್ರೆಸ್ ಗದಗ ಬೈಪಾಸ್ ಮೂಲಕ ಸಂಚರಿಸಿದರೆ ಜಿಲ್ಲೆಯ ಸಾವಿರಾರು ಪ್ರಯಾಣಿಕರಿಗೆ ತೊಂದರೆಯಾಗಲಿದೆ. ಬೈಪಾಸ್ ನಿಲ್ದಾಣವು ನಗರದಿಂದ ಸುಮಾರು 8 ಕಿ.ಮೀ. ದೂರದಲ್ಲಿದ್ದು, ಸಮರ್ಪಕ ರಸ್ತೆ ಹಾಗೂ ಸಾರ್ವಜನಿಕ ಸಾರಿಗೆ ವ್ಯವಸ್ಥೆಯೂ ಇಲ್ಲ. ಹೀಗಾಗಿ ಸಾಮಾನ್ಯ ಪ್ರಯಾಣಿಕರು, ಹಿರಿಯ ನಾಗರಿಕರು ಹಾಗೂ ಮಹಿಳೆಯರಿಗೆ ಹೆಚ್ಚಿನ ಸಮಸ್ಯೆಯಾಗಲಿದೆ ಎಂದು ತಿಳಿಸಿದ್ದಾರೆ.
ಬೈಪಾಸ್ ಮಾರ್ಗವನ್ನು ಮುಖ್ಯವಾಗಿ ಸರಕು ಸಾಗಣೆ ರೈಲುಗಳಿಗಾಗಿ ಬಳಸಬೇಕು. ಪ್ರಯಾಣಿಕರ ರೈಲುಗಳನ್ನು ಗದಗ ಮೇನ್ ಜಂಕ್ಷನ್ ಮೂಲಕವೇ ಓಡಿಸುವುದರಿಂದ ಜಿಲ್ಲೆಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಈಗಾಗಲೇ ವಾರದಲ್ಲಿ ಎರಡು ದಿನ ಸಂಚರಿಸುವ ವಿಜಯಪುರ–ಯಶವಂತಪುರ ರೈಲು ಕೂಡ ಗದಗ ನಿಲ್ದಾಣವನ್ನು ತಪ್ಪಿಸಿ ಸಂಚರಿಸುತ್ತಿದ್ದು, ಇದರಿಂದ ಜಿಲ್ಲೆಯ ಪ್ರಯಾಣಿಕರು ನೇರ ರೈಲು ಸಂಪರ್ಕದಿಂದ ವಂಚಿತರಾಗುತ್ತಿದ್ದಾರೆ. ಈ ಕುರಿತು ಹಲವು ಬಾರಿ ಮನವಿ ಸಲ್ಲಿಸಿದರೂ ರೈಲ್ವೆ ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಗದಗ–ಹರಪನಹಳ್ಳಿ ಹೊಸ ರೈಲು ಮಾರ್ಗ ನಿರ್ಮಾಣವಾದರೆ ಉತ್ತರ ಕರ್ನಾಟಕ ಭಾಗದ ಪ್ರಯಾಣಿಕರಿಗೆ ಮತ್ತಷ್ಟು ಅನುಕೂಲವಾಗಲಿದೆ ಎಂದು ಹೇಳಿದ್ದಾರೆ. ವಿಶ್ವನಾಥ ಖಾನಾಪೂರ ಅವರೊಂದಿಗೆ ಜಗದೀಶ ಕಂಗೂರಿ, ವೆಂಕಟೇಶ ಕಬಾಡಿ, ಸಿದ್ದು ಜರತಖನ್ನಿ, ರಜಾಕ್ ನೂರಭಾಷಾ ಸೇರಿದಂತೆ ಹಲವರು ರೈಲ್ವೆ ಸಚಿವ ಅಶ್ವಿನಿ ವೈಷ್ಣವ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ರಾಜ್ಯ ಸಚಿವ ವಿ. ಸೋಮಣ್ಣ, ಸಂಸದ ಬಸವರಾಜ ಬೊಮ್ಮಾಯಿ ಹಾಗೂ ರೈಲ್ವೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.
“ಸಮಯ ಉಳಿತಾಯಕ್ಕಿಂತ ಪ್ರಯಾಣಿಕರ ಅನುಕೂಲ ಮುಖ್ಯ. ಗದಗ ಮೇನ್ ಜಂಕ್ಷನ್ ಮೂಲಕ ರೈಲು ಸಂಚಾರ ಮಾಡಿದರೆ ಸಾವಿರಾರು ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಬೈಪಾಸ್ ಮಾರ್ಗದಿಂದ ಸಾರ್ವಜನಿಕರಿಗೆ ಯಾವುದೇ ಪ್ರಯೋಜನವಿಲ್ಲ.”
ವಿಶ್ವನಾಥ ಖಾನಾಪೂರ



