ಬೆಂಗಳೂರು: ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದ ಕೃಷ್ಣಭೈರೇಗೌಡ ಅವರು ಮೊದಲ ಸಭೆಯಲ್ಲೇ ನಗರದ ರಸ್ತೆಗಳ ಬಗ್ಗೆ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡು ಬಿಸಿ ಮುಟ್ಟಿಸಿದ್ದರು.
ಕ್ರೆಸೆಂಟ್ ರಸ್ತೆಯ ಡಾಂಬರೀಕರಣ ಕಾಮಗಾರಿಯಲ್ಲಿ ಗುಣಮಟ್ಟದ ಕೊರತೆ ಹಾಗೂ ಕರ್ತವ್ಯಲೋಪ ಕಂಡುಬಂದ ಹಿನ್ನೆಲೆಯಲ್ಲಿ ಸಂಪಂಗಿರಾಮನಗರ ವಿಭಾಗದ ಸಹಾಯಕ ಇಂಜಿನಿಯರ್ ಪೂಜಾರಪ್ಪ ಅವರನ್ನು ಅಮಾನತು ಮಾಡಲಾಗಿದೆ.
ರಸ್ತೆ ಕಾಮಗಾರಿಯಲ್ಲಿ ನಿಗದಿತ ಪ್ರಮಾಣ ಮತ್ತು ದಪ್ಪದಲ್ಲಿ ಆಸ್ಫಾಲ್ಟಿಂಗ್ ಮಾಡದೇ ನಿರ್ಲಕ್ಷ್ಯ ವಹಿಸಿರುವುದು ಪರಿಶೀಲನೆ ವೇಳೆ ಬೆಳಕಿಗೆ ಬಂದಿದ್ದು, ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ಅಮಾನತು ಆದೇಶ ಹೊರಡಿಸಿದ್ದಾರೆ.
ಇದರ ಜೊತೆಗೆ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರ ಸಂಪೂರ್ಣ ವಿವರಗಳನ್ನು ಸಲ್ಲಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಗುಣಮಟ್ಟ ಕಾಪಾಡದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಸಹ ನಿರ್ದೇಶನ ನೀಡಿದ್ದಾರೆ.
ಇತ್ತೀಚೆಗೆ ನಡೆದ ಸಭೆಯಲ್ಲಿ ನಗರದ ರಸ್ತೆ ಗುಂಡಿಗಳ ಸಮಸ್ಯೆ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಕೃಷ್ಣ ಭೈರೇಗೌಡ, “ಬೆಂಗಳೂರು ರಸ್ತೆ ಗುಂಡಿ ಮುಚ್ಚುವುದು ರಾಕೆಟ್ ಸೈನ್ಸ್ ಅಲ್ಲ” ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದೀಗ ಪರಿಶೀಲನೆಯ ಬಳಿಕ ಮೊದಲ ಅಮಾನತು ಕ್ರಮ ಜರುಗಿರುವುದು ಅಧಿಕಾರಿಗಳಲ್ಲಿ ಎಚ್ಚರಿಕೆಯ ಸಂದೇಶ ರವಾನಿಸಿದಂತಾಗಿದೆ.



