HomeBengaluru NewsValmiki Corporation Scam: ಕೋರ್ಟ್ ಅನುಮತಿ ಇಲ್ಲದೆ ದೆಹಲಿ ಪ್ರಯಾಣ? ಸಚಿವ ನಾಗೇಂದ್ರ ಜಾಮೀನು ರದ್ದಾಗುತ್ತಾ?

Valmiki Corporation Scam: ಕೋರ್ಟ್ ಅನುಮತಿ ಇಲ್ಲದೆ ದೆಹಲಿ ಪ್ರಯಾಣ? ಸಚಿವ ನಾಗೇಂದ್ರ ಜಾಮೀನು ರದ್ದಾಗುತ್ತಾ?

For Dai;y Updates Join Our whatsapp Group

ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬಹುಕೋಟಿ ರೂಪಾಯಿ ಹಗರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಸಚಿವ ಬಿ. ನಾಗೇಂದ್ರ ಅವರು ಜಾಮೀನು ಷರತ್ತು ಉಲ್ಲಂಘಿಸಿ ದೆಹಲಿಗೆ ಪ್ರಯಾಣಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಈ ಆರೋಪದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಸಾಕ್ಷ್ಯ ಸಂಗ್ರಹಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.

ನ್ಯಾಯಾಲಯದ ಷರತ್ತು ಉಲ್ಲಂಘಿಸಿರುವುದು ದಾಖಲೆಗಳಿಂದ ದೃಢಪಟ್ಟರೆ, ನಾಗೇಂದ್ರ ಅವರ ಜಾಮೀನು ರದ್ದುಗೊಳಿಸುವಂತೆ ನ್ಯಾಯಾಲಯದ ಮೊರೆ ಹೋಗುವ ಸಾಧ್ಯತೆ ಇದೆ.

ರಾಜ್ಯದಿಂದ ಹೊರಗೆ ಹೋಗಲು ಕೋರ್ಟ್ ಅನುಮತಿ ಕಡ್ಡಾಯ:

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು 2024ರ ಅಕ್ಟೋಬರ್ 14ರಂದು ನಾಗೇಂದ್ರ ಅವರಿಗೆ ಜಾಮೀನು ನೀಡುವ ಸಂದರ್ಭದಲ್ಲಿ, ಕರ್ನಾಟಕ ರಾಜ್ಯದ ಗಡಿ ದಾಟಿ ಪ್ರಯಾಣಿಸಬೇಕಾದರೆ ನ್ಯಾಯಾಲಯದಿಂದ ಮುಂಚಿತವಾಗಿ ಲಿಖಿತ ಅನುಮತಿ ಪಡೆಯಬೇಕು ಎಂಬ ಷರತ್ತು ವಿಧಿಸಿತ್ತು.

ಆದರೆ ಈ ಷರತ್ತು ಜಾರಿಯಲ್ಲಿದ್ದರೂ ನಾಗೇಂದ್ರ ಅವರು ನ್ಯಾಯಾಲಯದ ಅನುಮತಿ ಪಡೆಯದೆ ಜುಲೈ 15 ಹಾಗೂ ಜುಲೈ 26ರಂದು ದೆಹಲಿಗೆ ತೆರಳಿದ್ದಾರೆ ಎಂಬ ಮಾಹಿತಿ ಇಡಿಗೆ ಲಭ್ಯವಾಗಿದೆ ಎನ್ನಲಾಗಿದೆ.

ಜುಲೈ 15ರಂದು ಸಂಜೆ 6.15ರ ಇಂಡಿಗೋ ವಿಮಾನ ಹಾಗೂ ಜುಲೈ 26ರಂದು ಮಧ್ಯಾಹ್ನ 1.55ರ ವಿಮಾನದ ಮೂಲಕ ಅವರು ದೆಹಲಿಗೆ ಪ್ರಯಾಣಿಸಿದ್ದಾರೆ ಎಂಬ ಮಾಹಿತಿಯ ಆಧಾರದ ಮೇಲೆ ಇಡಿ ಅಧಿಕಾರಿಗಳು ಪರಿಶೀಲನೆ ಆರಂಭಿಸಿದ್ದಾರೆ ಎನ್ನಲಾಗಿದೆ.

ವಿಮಾನ ನಿಲ್ದಾಣದ ದಾಖಲೆ ಪರಿಶೀಲನೆ:

ಆರೋಪದ ಕುರಿತು ಮಾಹಿತಿ ಲಭ್ಯವಾದ ಬಳಿಕ ಇಡಿ ಅಧಿಕಾರಿಗಳು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಿಸಿಟಿವಿ ದೃಶ್ಯಾವಳಿಗಳು, ಪ್ರೋಟೋಕಾಲ್ ವಿಭಾಗದ ರಿಜಿಸ್ಟರ್‌ಗಳು ಹಾಗೂ ಸಂಬಂಧಪಟ್ಟ ವಿಮಾನಯಾನ ಸಂಸ್ಥೆಗಳ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ನಾಗೇಂದ್ರ ಅವರ ದೆಹಲಿ ಪ್ರಯಾಣದ ದಿನಾಂಕ, ಸಮಯ ಹಾಗೂ ನ್ಯಾಯಾಲಯದ ಅನುಮತಿ ಇದ್ದಿತೇ ಎಂಬುದನ್ನು ದಾಖಲೆಗಳ ಮೂಲಕ ಖಚಿತಪಡಿಸಿಕೊಳ್ಳಲು ತನಿಖೆ ನಡೆಸಲಾಗುತ್ತಿದೆ ಎನ್ನಲಾಗಿದೆ.

ಮೂರು ಬಾರಿ ಮಾತ್ರ ಪ್ರಯಾಣಕ್ಕೆ ಅನುಮತಿ:

ಈ ಹಿಂದೆ ನ್ಯಾಯಾಲಯವು ನಾಗೇಂದ್ರ ಅವರಿಗೆ ಮೂರು ಅವಧಿಯಲ್ಲಿ ರಾಜ್ಯದಿಂದ ಹೊರಗೆ ಪ್ರಯಾಣಿಸಲು ಅನುಮತಿ ನೀಡಿತ್ತು ಎನ್ನಲಾಗಿದೆ.

ಏಪ್ರಿಲ್ 26ರಿಂದ ಜೂನ್ 2ರವರೆಗೆ, ಜೂನ್ 11ರಿಂದ ಜುಲೈ 7ರವರೆಗೆ ಹಾಗೂ ಜುಲೈ 16ರಿಂದ ಜುಲೈ 25ರವರೆಗೆ ದೆಹಲಿ ಸೇರಿದಂತೆ ರಾಜ್ಯದ ಹೊರಗೆ ಪ್ರಯಾಣಿಸಲು ನ್ಯಾಯಾಲಯ ಅನುಮತಿ ನೀಡಿತ್ತು.

ಆದರೆ ಜುಲೈ 15 ಹಾಗೂ ಜುಲೈ 26ರಂದು ಅವರು ದೆಹಲಿಗೆ ತೆರಳಿರುವ ಮಾಹಿತಿ ತನಿಖೆಯಲ್ಲಿ ಲಭ್ಯವಾಗಿದೆ ಎನ್ನಲಾಗಿದ್ದು, ಈ ಎರಡೂ ದಿನಗಳ ಪ್ರಯಾಣದ ಬಗ್ಗೆ ಇದೀಗ ಇಡಿ ಪರಿಶೀಲನೆ ನಡೆಸುತ್ತಿದೆ.

ಜುಲೈ 17ರಂದು ಎಐಸಿಸಿ ಕೇಂದ್ರ ಕಚೇರಿ ಆವರಣದಲ್ಲಿ ವಿಜಯಾನಂದ ಕಾಶಪ್ಪನವರ್, ಅಜಯ್ ಸಿಂಗ್, ಶಾಸಕ ಎ.ಎಸ್. ಪೊನ್ನಣ್ಣ ಹಾಗೂ ಎನ್.ಎಚ್. ಕೋನರೆಡ್ಡಿ ಅವರೊಂದಿಗೆ ನಾಗೇಂದ್ರ ಕಾಣಿಸಿಕೊಂಡಿರುವ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದವು. ಆದರೆ ಆ ದಿನ ದೆಹಲಿ ಪ್ರವಾಸಕ್ಕೆ ನ್ಯಾಯಾಲಯದ ಅನುಮತಿ ಇದ್ದುದಾಗಿ ತಿಳಿದುಬಂದಿದೆ.

ದೆಹಲಿ ಪ್ರವಾಸಕ್ಕೆ ಅನುಮತಿ ಕೋರಿದ್ದ ಅರ್ಜಿ ತಿರಸ್ಕಾರ:

ಜುಲೈ 26ರಿಂದ ಆಗಸ್ಟ್ 10ರವರೆಗೆ ದೆಹಲಿ ಪ್ರವಾಸ ಕೈಗೊಳ್ಳಲು ಅನುಮತಿ ನೀಡುವಂತೆ ನಾಗೇಂದ್ರ ಅವರು ಜುಲೈ 23ರಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಗೆ ಇಡಿ ಪರ ವಕೀಲರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ತನಿಖೆಯನ್ನು ವಿಳಂಬಗೊಳಿಸಲು ಪದೇಪದೇ ಪ್ರವಾಸದ ನೆಪ ಮಾಡುತ್ತಿದ್ದಾರೆ ಹಾಗೂ ಜಾಮೀನಿನ ಮೂಲಕ ನೀಡಿರುವ ಸ್ವಾತಂತ್ರ್ಯವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಇಡಿ ವಾದಿಸಿತ್ತು.

ವಾದ-ಪ್ರತಿವಾದ ಆಲಿಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಆಗಸ್ಟ್ 4ರಂದು ನಾಗೇಂದ್ರ ಅವರ ದೆಹಲಿ ಪ್ರವಾಸದ ಅರ್ಜಿಯನ್ನು ತಿರಸ್ಕರಿಸಿತ್ತು.

ಸಾಕ್ಷ್ಯ ಸಿಕ್ಕರೆ ಮುಂದೇನು?

ನಾಗೇಂದ್ರ ಅವರು ನ್ಯಾಯಾಲಯದ ಅನುಮತಿ ಇಲ್ಲದೆ ರಾಜ್ಯದಿಂದ ಹೊರಗೆ ಪ್ರಯಾಣಿಸಿರುವುದು ಅಧಿಕೃತ ದಾಖಲೆಗಳಿಂದ ದೃಢಪಟ್ಟರೆ, ಜಾಮೀನು ಷರತ್ತು ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಅವರ ಜಾಮೀನು ರದ್ದುಗೊಳಿಸುವಂತೆ ಇಡಿ ನ್ಯಾಯಾಲಯದ ಮೊರೆ ಹೋಗುವ ಸಾಧ್ಯತೆ ಇದೆ.

ನ್ಯಾಯಾಲಯ ಜಾಮೀನು ರದ್ದುಪಡಿಸಿದರೆ ನಾಗೇಂದ್ರ ಅವರು ಮತ್ತೆ ಜೈಲು ಪಾಲಾಗುವ ಸಾಧ್ಯತೆ ಇದೆ.

ಈ ಬೆಳವಣಿಗೆಗೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳ ತನಿಖೆ ಮುಂದುವರಿದಿದ್ದು, ವಿಮಾನಯಾನ ದಾಖಲೆಗಳು, ಸಿಸಿಟಿವಿ ದೃಶ್ಯಾವಳಿಗಳು ಹಾಗೂ ಇತರ ದಾಖಲೆಗಳ ಪರಿಶೀಲನೆಯ ಬಳಿಕ ಮುಂದಿನ ಕ್ರಮದ ಬಗ್ಗೆ ಸ್ಪಷ್ಟತೆ ಸಿಗಲಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img