ನೋಯ್ಡಾ: ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದ ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ (Yamuna Expressway) ಚಲಿಸುತ್ತಿದ್ದ ಸ್ಲೀಪರ್ ಬಸ್ನಲ್ಲಿ ಭೀಕರ ಬೆಂಕಿ ಅವಘಡ ಸಂಭವಿಸಿದ್ದು, 9 ಮಂದಿ ಪ್ರಯಾಣಿಕರು ಸಜೀವ ದಹನಗೊಂಡಿದ್ದಾರೆ. ಈ ದುರಂತಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತೀವ್ರ ಕಂಬನಿ ಮಿಡಿದಿದ್ದಾರೆ.
ಘಟನೆ ಕುರಿತು ಪ್ರಧಾನಿ ಕಚೇರಿ (PMO) ‘ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದು, “ಗ್ರೇಟರ್ ನೋಯ್ಡಾದಲ್ಲಿ ಬಸ್‌ಗೆ ಬೆಂಕಿ ಹೊತ್ತಿಕೊಂಡು ಜೀವಹಾನಿಯಾಗಿರುವ ಸುದ್ದಿ ತೀವ್ರ ದುಃಖ ತಂದಿದೆ. ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸುತ್ತೇನೆ ಹಾಗೂ ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ತಿಳಿಸಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರು ಮೃತರ ಕುಟುಂಬಗಳಿಗೆ ತಲಾ ₹2 ಲಕ್ಷ ಹಾಗೂ ಗಾಯಾಳುಗಳಿಗೆ ತಲಾ ₹50,000 ಪರಿಹಾರ ಘೋಷಿಸಿದ್ದಾರೆ.
ದುರಂತ ಸಂಭವಿಸಿದ ವೇಳೆ ಸ್ಲೀಪರ್ ಬಸ್‌ನಲ್ಲಿ ಸುಮಾರು 40 ರಿಂದ 50 ಮಂದಿ ಪ್ರಯಾಣಿಕರಿದ್ದರು. ಏಕಾಏಕಿ ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧದಲ್ಲಿ ಇಡೀ ಬಸ್‌ಗೆ ಆವರಿಸಿದ್ದರಿಂದ ತೀವ್ರ ಆತಂಕಗೊಂಡ ಕೆಲ ಪ್ರಯಾಣಿಕರು ಪ್ರಾಣ ಉಳಿಸಿಕೊಳ್ಳಲು ಚಲಿಸುತ್ತಿದ್ದ ಬಸ್‌ನಿಂದಲೇ ಹೊರಕ್ಕೆ ಜಿಗಿದಿದ್ದಾರೆ.
ಮಾಹಿತಿ ತಿಳಿಯುತ್ತಿದ್ದಂತೆ ಜೆವಾರ್ ಟೋಲ್ ಪ್ಲಾಜಾದಲ್ಲಿದ್ದ ರಕ್ಷಣಾ ವಾಹನಗಳು ಹಾಗೂ ಹೆಚ್ಚುವರಿ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಬಸ್‌ನ ಹವಾನಿಯಂತ್ರಣ (AC) ವ್ಯವಸ್ಥೆಯಲ್ಲಿ ಉಂಟಾದ ಸ್ಪಾರ್ಕ್ ಅಥವಾ ಸ್ಫೋಟದಿಂದ ಬೆಂಕಿ ಕಾಣಿಸಿಕೊಂಡಿದ್ದು, ಎಂಜಿನ್‌ನ ಲೂಬ್ರಿಕೇಟಿಂಗ್ ಆಯಿಲ್‌ಗೆ ತಗುಲಿ ಕ್ಷಣಾರ್ಧದಲ್ಲಿ ಇಡೀ ಬಸ್‌ಗೆ ಹರಡಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬಸ್‌ನ ಚಾಲಕ ಹಾಗೂ ನಿರ್ವಾಹಕನನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.

