ವಿಜಯಸಾಕ್ಷಿ ಸುದ್ದಿ, ಗದಗ: ಗ್ರಾಮ ಪಂಚಾಯಿತಿಯಲ್ಲಿ ಲಭ್ಯವಿರುವ ಸಂಪನ್ಮೂಲವನ್ನು ಸಮರ್ಪಕವಾಗಿ ಬಳಸಿಕೊಂಡು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿರುವ ಗ್ರಾಮ ಪಂಚಾಯಿತಿಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವತಿಯಿಂದ ಗಾಂಧಿ ಗ್ರಾಮ ಪುರಸ್ಕಾರ ನೀಡಿ ಗೌರವಿಸಲಾಗುತ್ತಿದೆ.
2023-24ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಗದಗ ಜಿಲ್ಲೆಯ ಏಳು ತಾಲೂಕುಗಳಿಂದ ಗದಗ ತಾಲೂಕಿನ ಅಂತೂರು, ಗಜೇಂದ್ರಗಡ ತಾಲೂಕಿನ ಹಾಲಕೇರಿ, ಲಕ್ಷ್ಮೇಶ್ವರ ತಾಲೂಕಿನ ಆಡರಕಟ್ಟ್ಟಿ, ಮುಂಡರಗಿ ತಾಲೂಕಿನ ಶಿವಾಜಿನಗರ, ನರಗುಂದ ತಾಲೂಕಿನ ವಾಸನ, ರೋಣ ತಾಲೂಕಿನ ಹಿರೇಹಾಳ ಹಾಗೂ ಶಿರಹಟ್ಟಿ ತಾಲೂಕಿನ ಕೊಂಚಿಗೇರಿ ಗ್ರಾಮ ಪಂಚಾಯಿತಿಗಳು ಆಯ್ಕೆಯಾಗಿವೆ.
ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾದ ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮದಲ್ಲಿನ ಪ್ರತಿ ಕುಟುಂಬವು ವೈಯಕ್ತಿಕ ಶೌಚಾಲಯ ಹೊಂದಿರುವುದು, ಗ್ರಾಮ ಸಭೆ, ಸಾಮಾನ್ಯ ಸಭೆಯನ್ನು ನಿಗದಿತ ಸಮಯಕ್ಕೆ ನಡೆಸುವುದು, ಅಭಿವೃದ್ಧಿ ಕಾಮಗಾರಿಗಳಲ್ಲಿ ಪಾರದರ್ಶಕತೆ, ಗ್ರಾಮ ಪಂಚಾಯಿತಿಯಲ್ಲಿ ಅತ್ಯುತ್ತಮವಾದ ಆಡಳಿತ ವ್ಯವಸ್ಥೆ, ಶೌಚಾಲಯಗಳ ನಿರ್ಮಾಣ ಮತ್ತು ಬಳಕೆ, ನರೇಗಾ ಯೋಜನೆಯಲ್ಲಿ ಉತ್ತಮ ಪ್ರಗತಿ, ಗ್ರಾಮ ಆರೋಗ್ಯ ಯೋಜನೆಯಡಿ ನರೇಗಾ ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ, ಕಂದಾಯ ವಸೂಲಿ, ಶುದ್ಧ ಕುಡಿಯುವ ನೀರು ಪೂರೈಕೆ ಹಾಗೂ ವಸತಿ ಯೋಜನೆಗಳಲ್ಲಿ ಗ್ರಾಮ ಪಂಚಾಯಿತಿಗಳು ಉತ್ತಮ ಸಾಧನೆ ತೋರಿವೆ.
ಗದಗ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಉಪ ಕಾರ್ಯದರ್ಶಿಗಳು, ಎಲ್ಲ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಎಲ್ಲ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳು ಗಾಂಧಿ ಗ್ರಾಮ ಪುರಸ್ಕಾರ ಸ್ವೀಕರಿಸಿದ್ದಕ್ಕೆ ಶುಭಾಶಯಗಳನ್ನು ವ್ಯಕ್ತಪಡಿಸಿದ್ದಾರೆ.
ಗದಗ ಜಿಲ್ಲೆಯ ಏಳು ತಾಲೂಕಿನ 2023-24ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಗೊಂಡಿದ್ದಕ್ಕಾಗಿ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಕೆ. ಪಾಟೀಲ ಸಂಬಂಧಿಸಿದ ಗ್ರಾಮ ಪಂಚಾಯಿತಿ ಅಧ್ಯಕ್ಷರುಗಳಿಗೆ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ.



