́ಮಣ್ಣು’ ಎಂಬುದು ಕೇವಲ ಕಾಲಿನ ಕೆಳಗಿನ ಧೂಳಲ್ಲ. ಅದು ನಮ್ಮ ಬದುಕಿನ ಮೂಲಾಧಾರ. ಸೃಷ್ಟಿಯ ಪಂಚಭೂತಗಳಲ್ಲಿ ಮಣ್ಣಿಗೆ ಅಗ್ರಸ್ಥಾನವಿದೆ. ಮನುಷ್ಯನ ದೇಹವೇ ಮಣ್ಣಿನ ಸಾರದಿಂದ ಕೂಡಿದೆ ಎಂದು ಹಿರಿಯರು ಹೇಳುತ್ತಾರೆ. ನಾವು ತಿನ್ನುವ ಅನ್ನದಿಂದ ಹಿಡಿದು, ಕುಡಿಯುವ ನೀರನ್ನು ಹಿಡಿದಿಟ್ಟುಕೊಳ್ಳುವವರೆಗೆ ಎಲ್ಲದರಲ್ಲೂ ಮಣ್ಣಿನ ಪಾತ್ರವಿದೆ. ಹುಟ್ಟಿದ ಮಗು ಮಣ್ಣಿನಲ್ಲಿ ಆಡುತ್ತಾ ಬೆಳೆಯುತ್ತದೆ. ಕೊನೆಗೆ ಪ್ರಾಣ ಬಿಟ್ಟಾಗ ಅದೇ ದೇಹ ಮಣ್ಣಿನಲ್ಲಿ ಲೀನವಾಗುತ್ತದೆ. ಹೀಗೆ ನಮ್ಮ ಆರಂಭ ಮತ್ತು ಅಂತ್ಯ ಎರಡೂ ಮಣ್ಣೇ ಆಗಿದೆ.
ಮಣ್ಣು ರಾತ್ರೋರಾತ್ರಿ ಸೃಷ್ಟಿಯಾಗುವ ವಸ್ತುವಲ್ಲ. ಕೇವಲ ಒಂದು ಇಂಚು ಮಣ್ಣು ಸೃಷ್ಟಿಯಾಗಲು ನೂರಾರು ಅಥವಾ ಸಾವಿರಾರು ವರ್ಷಗಳು ಬೇಕಾಗುತ್ತವೆ. ಬಿಸಿಲು, ಮಳೆ, ಗಾಳಿ ಮತ್ತು ಹವಾಮಾನದ ಬದಲಾವಣೆಗಳಿಂದ ದೊಡ್ಡ ಬಂಡೆಗಳು ಮತ್ತು ಶಿಲೆಗಳು ಒಡೆದು, ಸವೆದು ಸಣ್ಣ ಪುಡಿಯಾಗುತ್ತವೆ. ಈ ಕಲ್ಲು ಪುಡಿಯ ಜೊತೆಗೆ ಕೊಳೆತ ಸಸ್ಯಗಳು ಮತ್ತು ಪ್ರಾಣಿಗಳ ಅವಶೇಷಗಳು ಸೇರಿಕೊಂಡು ಫಲವತ್ತಾದ ಮಣ್ಣು ತಯಾರಾಗುತ್ತದೆ.
ಪಂಚಭೂತಗಳಲ್ಲಿ ಮಣ್ಣು ನಮ್ಮ ಅಸ್ತಿತ್ವದ ಮೂಲಾಧಾರವಾಗಿದೆ. ವಿಜ್ಞಾನದ ಪ್ರಕಾರ, ಒಂದು ಟೀ ಚಮಚದಷ್ಟು ಆರೋಗ್ಯಕರ ಮಣ್ಣಿನಲ್ಲಿ ಇಡೀ ಭೂಮಿಯ ಮೇಲಿರುವ ಮನುಷ್ಯರಿಗಿಂತ ಹೆಚ್ಚು ಸೂಕ್ಷ್ಮಜೀವಿಗಳಿರುತ್ತವೆ. ಈ ಸೂಕ್ಷ್ಮಜೀವಿಗಳೇ ಮಣ್ಣಿನ ಫಲವತ್ತತೆಯನ್ನು ಕಾಪಾಡುವ ಮತ್ತು ನಮಗೆ ಆಹಾರ ಬೆಳೆಯಲು ಸಹಾಯ ಮಾಡುವ ‘ರೈತ ಮಿತ್ರರು’. ಮಣ್ಣು ಒಂದು ನಿರ್ಜೀವ ವಸ್ತುವಲ್ಲ, ಅದೊಂದು ಜೀವಂತ ವ್ಯವಸ್ಥೆ. ನಮ್ಮ ಹಸಿವನ್ನು ನೀಗಿಸುವ ಪ್ರತಿಯೊಂದು ತುತ್ತು ಅನ್ನವೂ ಮಣ್ಣಿನ ಕೊಡುಗೆಯೇ.
ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ಮಣ್ಣಿನ ಮಗ ಎಂದು ಕರೆಸಿಕೊಳ್ಳುವ ಮನುಷ್ಯನೇ ಮಣ್ಣಿನ ಪ್ರಬಲ ಶತ್ರುವಾಗುತ್ತಿದ್ದಾನೆ. ಅಭಿವೃದ್ಧಿಯ ಹೆಸರಿನಲ್ಲಿ ನಾವು ಮಣ್ಣಿನ ದುರ್ಬಳಕೆ ಮಾಡುತ್ತಿರುವುದು ಅಷ್ಟಿಷ್ಟಲ್ಲ. ಹೆಚ್ಚು ಇಳುವರಿ ಪಡೆಯುವ ದುರಾಸೆಯಿಂದ ಕೃಷಿಯಲ್ಲಿ ಅತಿಯಾದ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳನ್ನು ಬಳಸಲಾಗುತ್ತಿದೆ. ಇದರಿಂದ ಮಣ್ಣು ಸಾಯುತ್ತಿದೆ.
ಮಣ್ಣನ್ನು ಉಳಿಸುವುದು ಕೇವಲ ರೈತರ ಜವಾಬ್ದಾರಿಯಲ್ಲ. ಇದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಿದೆ. ಮಣ್ಣು ಫಲವತ್ತತೆ ಕಳೆದುಕೊಂಡರೆ, ಕೃಷಿ ಕುಂಠಿತವಾಗುತ್ತದೆ. ಕೃಷಿ ಕುಂಠಿತವಾದರೆ, ಮಣ್ಣು ಸತ್ತರೆ, ಆಹಾರದ ಅಭಾವ ಉಂಟಾಗಿ ಮನುಕುಲವೇ ಸಂಕಷ್ಟಕ್ಕೆ ಸಿಲುಕುತ್ತದೆ. ಇದನ್ನು ಅರಿತ ಜನರು ಹೊಲದ ಬದುವುಗಳಲ್ಲಿ ಗಿಡ ಮರಗಳನ್ನು ಬೆಳಸಬೇಕು. ಇದರಿಂದ ಮಣ್ಣಿನ ಸವೆತ ತಡೆಗಟ್ಟಬಹುದು. ಸುಮಾರು 20 ವರ್ಷಗಳ ಹಿಂದಿನ ಮಾತು. ಅಂದಿನ ಕೃಷಿ ಪದ್ಧತಿ ಮತ್ತು ಗ್ರಾಮೀಣ ಜೀವನಶೈಲಿಯನ್ನು ಒಮ್ಮೆ ಹಿಂತಿರುಗಿ ನೋಡಿದರೆ, ನಮಗೆ ಕಾಣಸಿಗುವುದು ಕೇವಲ ಕಪ್ಪನೆಯ ಮಣ್ಣಲ್ಲ, ಬದಲಾಗಿ ಜೀವಂತ ಮಣ್ಣು. ಅಂದಿನ ಮಣ್ಣು ಸಮೃದ್ಧವಾಗಿತ್ತು, ಪೋಷಕಾಂಶಗಳ ಕೂಡಿತ್ತು. ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ಅಂದಿನ ಹಿರಿಯರು ಹೇಳುತ್ತಿದ್ದ ಮಾತುಗಳಲ್ಲಿ ಅಡಗಿದ್ದ ವಿಜ್ಞಾನ ಮತ್ತು ಇಂದಿನ ವಾಸ್ತವವಾಗಿದೆ.
ಮಕ್ಕಳು ಮಣ್ಣಿನಲ್ಲಿ ಆಡಿದಾಗ, ಗಾಯವಾದಾಗ ಮಣ್ಣು ತಗುಲಿದಾಗ, ದೇಹವು ನೈಸರ್ಗಿಕವಾಗಿಯೇ ರೋಗಗಳ ವಿರುದ್ಧ ಹೋರಾಡುವ ರೋಗನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳುತ್ತಿತ್ತು. ಆರೋಗ್ಯವಂತ ಮಣ್ಣಿನಲ್ಲಿ ಆರೋಗ್ಯಕ್ಕೆ ಪೂರಕವಾದ ಕೋಟ್ಯಂತರ ಬ್ಯಾಕ್ಟೀರಿಯಾಗಳು ಇರುತ್ತವೆ.
ನಾವು ಮಣ್ಣಿನ ಸಂಪರ್ಕಕ್ಕೆ ಬಂದಾಗ, ಉಸಿರಾಟದ ಮೂಲಕವೋ ಅಥವಾ ಚರ್ಮದ ಮೂಲಕವೋ ಈ ಸೂಕ್ಷ್ಮಾಣುಗಳು ನಮ್ಮ ದೇಹವನ್ನು ಪ್ರವೇಶಿಸುತ್ತವೆ. ಇವು ಮನುಷ್ಯನ ದೇಹದಲ್ಲಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ ಮತ್ತು ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ, ಸಂತೋಷದ ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತವೆ ಎಂದು ಸಂಶೋಧನೆಗಳು ದೃಢಪಡಿಸಿವೆ. ಅಂದರೆ, ಅಂದಿನ ರೈತರು ಮತ್ತು ಮಕ್ಕಳು ಹೆಚ್ಚು ಆರೋಗ್ಯವಾಗಿರಲು ಮಣ್ಣಿನೊಡನೆ ಇದ್ದ ಅವರ ನಿರಂತರ ಸಂಪರ್ಕವೇ ಕಾರಣವಾಗಿತ್ತು.
ಇಂದಿನ ಪೀಳಿಗೆ ಮಣ್ಣನ್ನು ಮುಟ್ಟಲು ಅಸಹ್ಯ ಪಟ್ಟುಕೊಳ್ಳುತ್ತದೆ. ಸದಾ ಸ್ಯಾನಿಟೈಸರ್ ಮತ್ತು ಕೃತಕ ಸ್ವಚ್ಛತೆಗೆ ಒಗ್ಗಿಕೊಂಡಿರುವ ಕಾರಣ, ಸಣ್ಣಪುಟ್ಟ ಬದಲಾವಣೆಗಳಿಗೂ ದೇಹ ಅನಾರೋಗ್ಯಕ್ಕೆ ತುತ್ತಾಗುತ್ತಿದೆ. ರೋಗನಿರೋಧಕ ಶಕ್ತಿ ಕುಂದಿದೆ. ಮಣ್ಣಿನ ನಂಟು, ಆರೋಗ್ಯದ ಗಂಟು ಎಂಬ ಹಿರಿಯರ ಮಾತನ್ನು ನಾವಿಂದು ಗಂಭೀರವಾಗಿ ಪರಿಗಣಿಸಬೇಕಾದ ಸಮಯ ಬಂದಿದೆ.
ನಾವು ಎಲ್ಲೆಂದರಲ್ಲಿ ಬಿಸಾಡುವ ಪ್ಲಾಸ್ಟಿಕ್ ತ್ಯಾಜ್ಯಗಳು ಮಣ್ಣಿನ ಉಸಿರುಗಟ್ಟಿಸುತ್ತಿವೆ. ಇದು ಮಣ್ಣಿನೊಳಗೆ ನೀರು ಇಂಗದಂತೆ ತಡೆಯುತ್ತದೆ ಮತ್ತು ಮಣ್ಣಿನ ವಿಷತ್ವವನ್ನು ಹೆಚ್ಚಿಸುತ್ತದೆ. ನಗರೀಕರಣದ ಅಬ್ಬರದಲ್ಲಿ ಫಲವತ್ತಾದ ಭೂಮಿಯ ಮೇಲೆ ಕಾಂಕ್ರೀಟ್ ಕಟ್ಟಡಗಳು ಎದ್ದು ನಿಲ್ಲುತ್ತಿವೆ. ಮಣ್ಣಿಗೆ ಸೂರ್ಯನ ಬೆಳಕು ಮತ್ತು ಗಾಳಿ ಸೋಕದಂತೆ ಮಾಡಿ, ಅದನ್ನು ನಾವು ಹಾಳುಮಾಡುತ್ತಿದ್ದೇವೆ.
ಮಣ್ಣಿನ ಸವಕಳಿ ಮತ್ತು ಫಲವತ್ತತೆಯ ನಾಶ ಇದೇ ರೀತಿ ಮುಂದುವರಿದರೆ, ಮುಂದಿನ 40-50 ವರ್ಷಗಳಲ್ಲಿ ನಾವು ಆಹಾರ ಬೆಳೆಯಲು ಯೋಗ್ಯವಾದ ಮಣ್ಣನ್ನೇ ಕಳೆದುಕೊಳ್ಳಬಹುದು. ಮಣ್ಣು ತನ್ನ ಸಾರವನ್ನು ಕಳೆದುಕೊಂಡರೆ, ನಾವು ತಿನ್ನುವ ಆಹಾರದಲ್ಲಿ ಪೋಷಕಾಂಶಗಳಿರುವುದಿಲ್ಲ. ಇದು ಅಪೌಷ್ಟಿಕತೆ ಮತ್ತು ಹೊಸ ಕಾಯಿಲೆಗಳಿಗೆ ದಾರಿಯಾಗುತ್ತದೆ. ಮಣ್ಣಿನ ಬಗ್ಗೆ ನಮ್ಮ ಉದಾಸೀನತೆ, ನಮ್ಮ ಮುಂದಿನ ಪೀಳಿಗೆಗೆ ನಾವು ಮಾಡುತ್ತಿರುವ ದೊಡ್ಡ ಅಪರಾಧವಾಗಿದೆ.
ನಾವು ಸತ್ತ ಮೇಲೆ ಮಣ್ಣಾಗುತ್ತೇವೆ ನಿಜ, ಆದರೆ ಬದುಕಿರುವಾಗ ಆ ಮಣ್ಣನ್ನು ಸಾಯದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ಮಣ್ಣನ್ನು ಕೇವಲ ರಿಯಲ್ ಎಸ್ಟೇಟ್ ಆಸ್ತಿಯಾಗಿ ನೋಡದೆ, ಅದನ್ನೊಂದು ಜೀವಂತ ದೇವರೆಂದು ಗೌರವಿಸಬೇಕಿದೆ. ಸಾವಯವ ಕೃಷಿಗೆ ಒತ್ತು ನೀಡುವುದು, ಪ್ಲಾಸ್ಟ್ಟಿಕ್ ಬಳಕೆ ಕಡಿಮೆ ಮಾಡುವುದು, ಮರಗಳನ್ನು ಬೆಳೆಸಿ ಮಣ್ಣಿನ ಸವಕಳಿ ತಡೆಯುವುದು ಮತ್ತು ಮಣ್ಣಿನ ಮಹತ್ವದ ಬಗ್ಗೆ ಅರಿವು ಮೂಡಿಸುವುದು ಇಂದಿನ ತುರ್ತು ಅಗತ್ಯವಾಗಿದೆ. ಮಣ್ಣನ್ನು ಉಳಿಸುವುದೆಂದರೆ, ಮಾನವ ಕುಲವನ್ನು ಉಳಿಸಿದಂತೆ. ಏಕೆಂದರೆ, ಮಣ್ಣು ಇದ್ದರೆ ಮಾತ್ರ ನಾವು; ಇಲ್ಲದಿದ್ದರೆ ಎಲ್ಲವೂ ಶೂನ್ಯ.
ನಮ್ಮ ಪೂರ್ವಜರು ನಮಗೆ ಫಲವತ್ತಾದ ಮಣ್ಣನ್ನು ಬಳುವಳಿಯಾಗಿ ನೀಡಿದ್ದಾರೆ. ಅದನ್ನು ಕಲುಷಿತಗೊಳಿಸದೆ, ಮುಂದಿನ ಪೀಳಿಗೆಗೆ ಸುರಕ್ಷಿತವಾಗಿ ಹಸ್ತಾಂತರಿಸುವುದು ನಮ್ಮ ಜವಾಬ್ದಾರಿ. ಮಣ್ಣು ಕೇವಲ ಧೂಳಲ್ಲ. ಮಣ್ಣಿನ ಆರೋಗ್ಯವೇ ನಮ್ಮ ಆರೋಗ್ಯ. ಆದ್ದರಿಂದ ಇಂದೇ ಎಚ್ಚೆತ್ತುಕೊಳ್ಳೋಣ, ಮಣ್ಣನ್ನು ಉಳಿಸೋಣ.

-ಮುತ್ತವ್ವ ಹನಮಣ್ಣವರ
ಪ್ರಶಿಕ್ಷಣಾರ್ಥಿ, ವಾ.ಸಾ.ಸಂ ಇಲಾಖೆ, ಧಾರವಾಡ.


