ಹಾಸನ: ಹಾಸನದಲ್ಲಿ ಗಾಂಜಾ ಹಾವಳಿ ಹೆಚ್ಚಾಗಿದ್ದು, ಗಾಂಜಾ ಅಮಲಿನಲ್ಲಿ ಯುವಕನ ಬರ್ಬರ ಹತ್ಯೆ ಮಾಡಿದ ಘಟನೆ ನಡೆದಿದೆ. ಹತ್ಯೆ ನಂತರ ವಿಡಿಯೋ ಮಾಡಿ ವಿಕೃತಿ ಮೆರೆದಿದ್ದು, ಹೂವಿನಗಳ್ಳಿ ಕಾವಲ್ ಗ್ರಾಮದ ನಿವಾಸಿಯಾದ ಕೀರ್ತಿ (24) ಕೊಲೆಯಾದ ಯುವಕನಾಗಿದ್ದಾನೆ. ದೊಡ್ಡಕಣಗಾಲ್ ಗ್ರಾಮದ ನಿವಾಸಿಯಾದ ಉಲ್ಲಾಸ್ ಎಂಬ ಯುವಕನಿಂದ ಕೊಲೆ ಮಾಡಲಾಗಿದ್ದು,
ಕೀರ್ತಿ, ಉಲ್ಲಾಸ್ ಆಟೋ ಚಾಲಕರಾಗಿದ್ದು, ಸ್ನೇಹಿತರಾಗಿದ್ದರು. ಸೋಮವಾರ ಬೆಳಗ್ಗೆ ಕೀರ್ತಿ ಮನೆಯಿಂದ ಹೋಗಿದ್ದ. ಆನಂತರದಲ್ಲಿ ಉಲ್ಲಾಸ್ ಜೊತೆ ಜಗಳವಾಗಿತ್ತು ಎನ್ನಲಾಗಿದೆ. ಬಳಿಕ ನಿರ್ಜನ ಪ್ರದೇಶಕ್ಕೆ ಹೋಗಿದ್ದ ನಾಲ್ಕೈದು ಯುವಕರು ಗಾಂಜಾ ಸೇವಿಸಿ ನಂತರ ಕೀರ್ತಿ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆಗೈದಿದ್ದಾರೆ.
ಸೋಮವಾರ ಸಂಜೆಯ ನಂತರ ಉಲ್ಲಾಸ್ ತನ್ನ ಇನ್ಸ್ಟಾಗ್ರಾಂ ಪೋಸ್ಟ್ ಹಾಗೂ ವ್ಯಾಟ್ಸಪ್ ಗ್ರೂಪ್‌ಗಳಲ್ಲಿ ವೀಡಿಯೋ ಹರಿಬಿಟ್ಟಿದ್ದಾರೆ. ನಾನು ಇವನನ್ನು ಮರ್ಡರ್ ಮಾಡಿದ್ದೇನೆ. ನಾನು ಈಗ ಬೆಳೆದಿದ್ದಾನೆ ಎಂದು ಹೇಳುವ ಜೊತೆಗೆ ಕೆಲವು ಅಶ್ಲೀಲ ಪದಗಳನ್ನು ಮಾತನಾಡಿದ ವೀಡಿಯೋ ಹರಿಬಿಟ್ಟಿದ್ದಾರೆ.
ವೀಡಿಯೋ ನೋಡಿದ ಪೊಲೀಸರು ಕೊಲೆ ಆಗಿರುವ ಜಾಗವನ್ನು ಹುಡುಕಾಡಲು ಪರದಾಡಿದ್ದಾರೆ. ಕೊನೆಗೆ ವೀಡಿಯೋದಲ್ಲಿದ್ದ ಗ್ಯಾರೆಜ್ ವಿಳಾಸ ತಿಳಿದು ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಕೀರ್ತಿ ಶವ ಪತ್ತೆಯಾಗಿದೆ.ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು, ಸೋಕೋ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಮೃತದೇಹದ ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆ ಶವಾಗಾರದಲ್ಲಿ ಇರಿಸಲಾಗಿದೆ. ಹಾಸನ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.



