ದಾವಣಗೆರೆ: ಸರ್ಕಾರಿ ಕೆಲಸ ಸಿಗದ ಹಿನ್ನೆಲೆ ಮನನೊಂದು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಗುಡ್ಡದಲಿಂಗಣ್ಣನಹಳ್ಳಿಯಲ್ಲಿ ಜರುಗಿದೆ. ಅಂಜಿನಪ್ಪ (26) ಮೃತ ದುರ್ಧೈವಿಯಾಗಿದ್ದು,
ಪದವಿ ಮುಗಿಸಿದಾಗಿನಿಂದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುತ್ತಿದ್ದ. ಅಲ್ಲದೇ ತನ್ನ ರೂಂನಲ್ಲಿ ನಿರಂತರವಾಗಿ ಓದುತ್ತಿದ್ದ. ಆದರೂ ತಾನು ಪಟ್ಟ ಶ್ರಮಕ್ಕೆ ಪ್ರತಿಫಲ ಸಿಗುತ್ತಿಲ್ಲ ಎಂದು ಮನ ನೊಂದಿದ್ದ. ಅಲ್ಲದೇ, ಸ್ನೇಹಿತರೊಂದಿಗೆ ಎಷ್ಟೇ ಪ್ರಯತ್ನಪಟ್ಟರೂ ಉದ್ಯೋಗ ಸಿಕ್ಕಿಲ್ಲ ಎಂಬ ಬೇಸರವನ್ನು ಹಂಚಿಕೊಂಡಿದ್ದನು.
ಕಳೆದ ರಾತ್ರಿ 7 ಗಂಟೆ ಸುಮಾರಿಗೆ ಮನೆಯ ಮೇಲ್ಚಾವಣಿಯಲ್ಲಿ ತಾಯಿ ಒಣಗಿಸಲು ಹಾಕಿದ್ದ ಸೀರೆ ಬಳಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರಾತ್ರಿ ಊಟಕ್ಕೆ ಬಾರದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಬಾಗಿಲು ತಟ್ಟಿದರೂ ಪ್ರತಿಕ್ರಿಯೆ ಸಿಕ್ಕಿರಲಿಲ್ಲ.
ಬೆಳಿಗ್ಗೆ ಕಿಟಕಿಯಿಂದ ನೋಡಿದಾಗ ಅವನ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.ಘಟನೆಯಿಂದ ಗ್ರಾಮದಲ್ಲಿ ಶೋಕ ವಾತಾವರಣ ನಿರ್ಮಾಣವಾಗಿದೆ. ಬಿಳಿಚೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಪ್ರಾರಂಭಿಸಲಾಗಿದೆ.



