ವಿಜಯಸಾಕ್ಷಿ ಸುದ್ದಿ, ಗದಗ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಲಕ್ಷಾಂತರ ಹುದ್ದೆಗಳನ್ನು ಭರ್ತಿ ಮಾಡುವಂತೆ ಆಗ್ರಹಿಸಿ ಬುಧವಾರ ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿಯಿಂದ ಯುವಜನರ ಪ್ರತಿಭಟನಾ ಧರಣಿ ನಡೆಯಿತು. ಯುವಜನರ ನ್ಯಾಯಯುತ ಹೋರಾಟ ಹಾಗೂ ಪ್ರಜಾತಾಂತ್ರಿಕ ಹಕ್ಕಿನ ಮೇಲೆ ದಾಳಿ ಮಾಡಿರುವ ಪೊಲೀಸರು ಹೋರಾಟ ಸಮಿತಿಯ ನಾಯಕರು, ಎಐಡಿವೈಓ ಯುವಜನ ಸಂಘಟನೆ ಹಾಗೂ ಎಐಕೆಕೆಎಂಎಸ್ ರೈತ ಸಂಘಟನೆ ಸೇರಿದಂತೆ ಹೋರಾಟವನ್ನು ಬೆಂಬಲಿಸಲು ಬಂದಿದ್ದ ಜನಪರ ಸಂಘಟನೆಗಳ ನಾಯಕರುಗಳನ್ನು ಬಂಧಿಸಿದ್ದಾರೆ. ಸರ್ಕಾರದ ಈ ದಮನಕಾರಿ ನಡೆಯನ್ನು ಎಐಡಿಎಸ್‌ಓ ಗದಗ ಜಿಲ್ಲಾ ಸಂಚಾಲಕರಾದ ಎಂ. ಶಾಂತಿ ತೀವ್ರವಾಗಿ ಖಂಡಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಪೊಲೀಸರು ಕೇಳಿದ ಮಾಹಿತಿಯನ್ನು ಹಲವು ಬಾರಿ ನೀಡಿದ್ದಾಗಿಯೂ ಉದ್ಯೋಗಾಕಾಂಕ್ಷಿಗಳ ಹೋರಾಟಕ್ಕೆ ಅನುಮತಿ ನಿರಾಕರಿಸಲಾಗಿದೆ. ಇದೀಗ ಯುವಜನರ ನ್ಯಾಯಯುತ ಹೋರಾಟವನ್ನು ಬೆಂಬಲಿಸಲು ಬಂದ ನಾಯಕರುಗಳನ್ನು ಬಂಧಿಸಲಾಗಿದೆ. ಧಾರವಾಡ ಸೇರಿದಂತೆ ರಾಜ್ಯದ ವಿದ್ಯಾರ್ಥಿ, ಯುವಜನರು ಹಾಗೂ ಪ್ರಜ್ಞಾವಂತ ಜನ ಸಮೂಹವು ಒಂದಾಗಿ ಸರ್ಕಾರದ ಈ ನಿರಂಕುಶ ಧೋರಣೆಯ ವಿರುದ್ಧ ಧ್ವನಿಯೆತ್ತಬೇಕು ಮತ್ತು ಹೋರಾಡುವ ಪ್ರಜಾತಾಂತ್ರಿಕ ಹಕ್ಕಿನ ರಕ್ಷಣೆಗಾಗಿ ಹೋರಾಡಬೇಕು ಕರೆ ನೀಡಿದ್ದಾರೆ.



