ಬೆಳಗಾವಿ ಪಾಲಿಕೆಯಲ್ಲಿ ಎಂಇಎಸ್ ಸೋಲಿಗೆ ಬಿಜೆಪಿ ವಿರುದ್ಧ ಮುಗಿಬಿದ್ದ ಶಿವಸೇನೆ

Vijayasakshi (Gadag News) :
  • ಸಾಮಾಜಿಕ ತಾಣದಲ್ಲಿ ಸರಣಿ ಪೋಸ್ಟ್ ಮೂಲಕ ಆಕ್ರೋಶ ಹೊರಹಾಕಿದ ಶಿವಸೇನೆ ಮುಖಂಡ ಸಂಜಯ ರಾವುತ್

ವಿಜಯಸಾಕ್ಷಿ ಸುದ್ದಿ, ಬೆಳಗಾವಿ

ಬೆಳಗಾವಿಯಲ್ಲಿ ಎಂಇಎಸ್ ಸೋಲಿನಿಂದ ಕಂಗೆಟ್ಟಿರುವ ಶಿವಸೇನೆ ಮತ್ತೆ ತನ್ನ ನರಿಬುದ್ದಿ ಪ್ರದರ್ಶಿಸುತ್ತಿದೆ. ಬೆಳಗಾವಿಯಲ್ಲಿ ಬಿಜೆಪಿ ಗೆಲುವು ಸ್ವಾಗತಿಸಿದ ಮಹಾರಾಷ್ಟ್ರ ಬಿಜೆಪಿ ವಿರುದ್ಧ ಗರಂ ಆಗಿರುವ ಶಿವಸೇನೆ ಮುಖಂಡ ಸಂಜಯ್ ರಾವುತ್ ಮಹಾರಾಷ್ಟ್ರ ಬಿಜೆಪಿ ಘಟಕ ಉದ್ದೇಶಿಸಿ ಸಾಮಾಜಿಕ ಜಾಲತಾಣದಲ್ಲಿ ಸರಣಿ ಪೋಸ್ಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಳಗಾವಿಯಲ್ಲಿ ಗೆದ್ದ ಬಿಜೆಪಿ ಮರಾಠಿ ಭಾಷಿಕ ಸದಸ್ಯರನ್ನು ಮುಂಬೈಗೆ ಕರೆತಂದು ಹುತಾತ್ಮ ಸ್ಮಾರಕ ಎದುರು ಶಿರಭಾಗಿ ಮರಾಠಿ ಅಸ್ಮಿತೆಯ ಪ್ರಮಾಣ ವಚನ ಬೋಧಿಸಿ, ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಎರಡು ಸಾಲಿನ ಠರಾವು ಪಾಸ್ ಮಾಡಿ, ಅಹಂಕಾರ ಬದಿಗೊತ್ತಿ ಇಷ್ಟು ಮಾಡಿ ಎಂದು ಸಂಜಯ್ ರಾವುತ್ ಬಿಜೆಪಿಗೆ ಸವಾಲ್ ಹಾಕಿದ್ದಾರೆ.

ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಶಿವಸೇನೆ ಎಂಇಎಸ್ ಬೆಂಬಲಿಸಿತ್ತು. ಆದರೆ, ಪ್ರಜ್ಞಾವಂತ ಮರಾಠಿಗರು ಎಂಇಎಸ್ ವಿರುದ್ಧ ಮತಹಾಕಿ ಭಾಷಾ ರಾಜಕಾರಣಕ್ಕೆ ಅಂತ್ಯ ಹಾಡಿದ್ದರು.

58 ವಾರ್ಡ್‌ಗಳ ಪೈಕಿ 35 ವಾರ್ಡ್‌ಗಳಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಕೇವಲ ಎರಡು ವಾರ್ಡ್ ಗಳಲ್ಲಿ ಗೆದ್ದು ಎಂಇಎಸ್ ಹೀನಾಯ ಸೋಲು ಅನುಭವಿಸಿತ್ತು.

ಎಂಇಎಸ್ ಸೋಲನ್ನು ಅರಗಿಸಿಕೊಳ್ಳಲಾಗದ ಶಿವಸೇನೆ ಪಾಲಿಕೆ ಸೋಲನ್ನು ಮರಾಠಿ ಭಾಷಿಕರ ಸೋಲು ಎಂದು ಬಿಂಬಿಸುವ ಮೂಲಕ ಮತ್ತೆ ಮರಾಠಿ ಭಾಷಿಕರನ್ನು ಎತ್ತಿಕಟ್ಟುವ ಕೆಲಸಕ್ಕೆ ಮುಂದಾಗಿದೆ.

ಮುಖವಾಣಿ ಸಾಮ್ನಾದಲ್ಲೂ ಕಿಡಿ

ಶಿವಸೇನೆ ಮುಖವಾಣಿ ‘ಸಾಮ್ನಾ’ದ ಸಂಪಾದಕೀಯದಲ್ಲೂ ಬೆಳಗಾವಿ ಮಹಾನಗರ ಪಾಲಿಕೆ ಸೋಲಿನ ವಿಚಾರ ಪ್ರಸ್ತಾಪಿಸಲಾಗಿದೆ. ‘ಬೆಳಗಾವಿ ಕದನ, ಮರಾಠಿ ಜನರಿಗೆ ಪಾಠ!’ ಎಂಬ ಅಡಿ ಬರಹದಲ್ಲಿ ಸಂಪಾದಕೀಯ ಬರೆಯಲಾಗಿದ್ದು, ಆಗ್ರಾದಲ್ಲಿ ಛತ್ರಪತಿ ಶಿವಾಜಿ ಮಹಾರಾಜರನ್ನು ಔರಂಗಜೇಬ್ ಬಂಧಿಸಿದ ಸುದ್ದಿ ಕೇಳಿ ಇಡೀ ಮಹಾರಾಷ್ಟ್ರ ಆತಂಕಕ್ಕೀಡಾಗಿತ್ತು.

ಆದರೆ, ಆ ವೇಳೆ ಛತ್ರಪತಿ ಶಿವಾಜಿ ಬಂಧನ ಸಂಭ್ರಮಿಸಿದ ಕೆಲ ಜ‌ನರು ಮಹಾರಾಷ್ಟ್ರದಲ್ಲೂ ಇದ್ದರು. ಅದೇ ಪ್ರವೃತ್ತಿ ಜ‌‌ನ ಬೆಳಗಾವಿಯಲ್ಲಿ ಮರಾಠಿ ಸೋಲನ್ನು ಸಂಭ್ರಮಿಸುತ್ತಿದ್ದಾರೆ.

ಗಡಿ ಹೋರಾಟದ ಹುತಾತ್ಮರ ಶಾಪ ಅವರಿಗೆ ತಟ್ಟುತ್ತದೆ. ಗಡಿ ಹೋರಾಟ ಮುಂದುವರಿಯಲಿದೆ. ಮರಾಠಿಗರು ಒಗ್ಗೂಡಿ ಮತ್ತೆ ಮುಂದೆ ಬರಲಿದ್ದಾರೆ. ಬೆಳಗಾವಿಯ ಪಾಲಿಕೆ ಸೋಲಿನಿಂದ ನಾವು ಪಾಠ ಕಲಿಯಬೇಕು. ಶತ್ರುಗಳು ಹಾಗೂ ಮಿತ್ರರು ನಮ್ಮ ಮನೆಯಲ್ಲೇ ಇದ್ದಾರೆ ಎಂದು ಉಲ್ಲೇಖಿಸಿದೆ.

ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTube ಅನುಸರಿಸಿ