ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದಲ್ಲಿ ಸುಮಾರು 7 ವರ್ಷಗಳ ಹಿಂದೆ ಆಶ್ರಯ ನಿವೇಶನದ ಹಕ್ಕುಪತ್ರಗಳನ್ನು ಪಡೆದಕೊಂಡ ಫಲಾನುಭವಿಗಳು ನಿವೇಶನ ಜಾಗೆಗಳನ್ನು ಗುರುತಿಸಿಕೊಡುವಂತೆ ಅಲೆದಾಡುತ್ತಿದ್ದು, ಇದೀಗ ಬುಧವಾರ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಅವರನ್ನು ಭೇಟಿ ಮಾಡಿ ನಿವೇಶನ ಜಾಗೆ ಗುರುತಿಸಿಕೊಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲು ಮನವಿ ಮಾಡಿದರು.
ಮನವಿ ಸ್ವೀಕರಿಸಿದ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಮಾತನಾಡಿ, ಕಳೆದ 7 ವರ್ಷಗಳ ಹಿಂದೆ ನಾನು ಶಾಸಕನಿದ್ದ ಅವಧಿಯಲ್ಲಿ ಆಶ್ರಯ ನಿವೇಶನದ ಹಕ್ಕುಪತ್ರಗಳನ್ನು ನೀಡಲಾಗಿತ್ತು. ಆದರೆ ಫಲಾನುಭವಿಗಳಿಗೆ ಇದುವರೆಗೂ ನಿವೇಶನ ಜಾಗೆಗಳನ್ನು ಗುರುತಿಸಿಕೊಡುವ ಕಾರ್ಯವಾಗದಿರುವದು ವಿಷಾದ ಸಂಗತಿಯಾಗಿದ್ದು, ಈ ಕುರಿತಂತೆ ಪುರಸಭೆ ಮುಖ್ಯಾಧಿಕಾರಿಗಳು ಕೂಡಲೇ ಜಾಗೆ ಗುರುತಿಸಿಕೊಡುವ ಕಾರ್ಯ ಮಾಡಬೇಕು ಎಂದು ಆಗ್ರಹಿಸಿದರು.
2018ರಲ್ಲಿ ಕಾಂಗ್ರೆಸ್ ಸರಕಾರವಿದ್ದಾಗ ನಿವೇಶನಗಳಿಗೆ 45 ಎಕರೆ ಜಮೀನು ಖರೀದಿ ಮಾಡಿ ಅದರಲ್ಲಿ 400ಕ್ಕಿಂತ ಹೆಚ್ಚು ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡಲಾಗಿತ್ತು. ಆದರೆ ಈ ಕುರಿತು ಇಲ್ಲಿಯವರೆಗೂ ಹಾಲಿ ಶಾಸಕರು ಆಸಕ್ತಿ ವಹಿಸಿ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿದರು. ಶಾಸಕರು ಈ ಬಗ್ಗೆ ಸರಕಾರದ ಗಮನ ಸೆಳೆದು ಬಡವರಿಗೆ, ಮನೆಯಿಲ್ಲದವರಿಗೆ ನಿವೇಶನ ಕೊಡಿಸಲು ಪ್ರಯತ್ನ ಮಾಡಬೇಕು. ಇನ್ನು 15 ದಿನದೊಳಗೆ ಫಲಾನುಭವಿಗಳಿಗೆ ನಿವೇಶನ ಜಾಗೆ ಗುರುತಿಸಿಕೊಡದಿದ್ದರೆ ಫಲಾನುಭವಿಗಳೊಂದಿಗೆ ಲಕ್ಷ್ಮೇಶ್ವರ ಪುರಸಭೆ ಎದುರು ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪುರಸಭೆ ನಾಮ ನಿರ್ದೇಶಿತ ಸದಸ್ಯ ಪ್ರಕಾಶ ಕೊಂಚಿಗೇರಿಮಠ, ಅಲ್ಲಾಭಕ್ಷಿ ಬೆಟಗೇರಿ, ನಾಗರಾಜ ಚಿಂಚಲಿ, ಸಿದ್ದು ದುರಗಣ್ಣವರ, ಛಾಯಪ್ಪ ಬಸಾಪುರ, ರಾಮಣ್ಣ ರಿತ್ತಿ, ಫಲಾನುಭವಿಗಳಾದ ಸುಶಿಲವ್ವ ಹಿರೇಮಠ, ಶಿವಲೀಲಾ ಹಿಪ್ಪರಗಿ, ಶಿವಗಂಗವ್ವ ಹುಡೇದ, ನಿರ್ಮಲಾ ಬೆಳದಡಿ, ಶೋಭಾ ಕಮತದ, ಶ್ಯಾಮಲಾ ಹುಲ್ಲೆಪ್ಪನವರ, ರೇಣುಕಾ ಮುದಕವಿ, ಸೌಭಾಗ್ಯ ಲಕ್ಷ್ಮೇಶ್ವರ ಕಟ್ಟಿಮನಿ, ಶಾಂತವ್ವ ಮುಂತಾದವರು ಇದ್ದರು.
ಇದೇ ವೇಳೆ ಪುರಸಭೆ ಮುಖ್ಯಾದಿಕಾರಿ ಮಹಾಂತೇಶ ಬೀಳಗಿ ಅವರಿಗೆ ಮೊಬೈಲ್ ಕರೆ ಮಾಡಿ ಹಕ್ಕುಪತ್ರ ಪಡೆದ ಫಲಾನುಭವಿಗಳ ಸಮಸ್ಯೆಯನ್ನು ಶೀಘ್ರವೇ ಸರಿಪಡಿಸಿ ಎಂದು ಸೂಚಿಸಿದರು. ರೋಣ ಶಾಸಕ ಹಾಗೂ ಖನಿಜ ನಿಗಮದ ಅಧ್ಯಕ್ಷ ಜಿ.ಎಸ್. ಪಾಟೀಲ ಅವರಿಗೂ ಸಹ ಫಲಾನುಭವಿಗಳು ಮನವಿ ಸಲ್ಲಿಸಿ ಸರಕಾರ ಮಟ್ಟದಲ್ಲಿ ಅನೂಕೂಲ ಮಾಡಿಕೊಡುವಂತೆ ವಿನಂತಿಸಿದರು.



