ಬೆಂಗಳೂರು: ನಗರದಲ್ಲಿ ನಿರಂತರ ಹೆಚ್ಚುತ್ತಿರುವ ಸಂಚಾರ ದಟ್ಟಣೆ, ಪಾರ್ಕಿಂಗ್ ಹಾಗೂ ಫುಟ್‌ಪಾತ್ ಅತಿಕ್ರಮಣ ಸಮಸ್ಯೆಗೆ ಪರಿಹಾರ ರೂಪಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮತ್ತೆ ಟೋಯಿಂಗ್ ಪ್ರಕ್ರಿಯೆ ಆರಂಭಿಸಲು ಸಿದ್ಧತೆ ನಡೆಸಿದೆ. ಈಗಾಗಲೇ ಒಂದು ಟೋಯಿಂಗ್ ವಾಹನ ಖರೀದಿಸಲಾಗಿದ್ದು,
ಉಳಿದ ನಾಲ್ಕು ಪಾಲಿಕೆಗಳಿಗೂ ಶೀಘ್ರದಲ್ಲೇ ಟೋಯಿಂಗ್ ವಾಹನಗಳನ್ನು ತರಲು ಪ್ರಾಧಿಕಾರ ತಯಾರಿ ನಡೆಸುತ್ತಿದೆ. ಜಿಬಿಎ ವ್ಯಾಪ್ತಿಗೆ ಐದು ಪಾಲಿಕೆಗಳು ಬರಲಿದ್ದು, ಪ್ರತಿಯೊಂದು ಪಾಲಿಕೆಗೂ ಟೋಯಿಂಗ್ ಕಾರ್ಯಾಚರಣೆಗೆ ಅಗತ್ಯವಾದ ವಾಹನಗಳ ಖರೀದಿ ಪ್ರಕ್ರಿಯೆ ನಡೆಯುತ್ತಿದೆ. ಒಂದು ತಿಂಗಳೊಳಗೆ ಟೆಂಡರ್ ಆಹ್ವಾನಿಸಿ ಟೋಯಿಂಗ್ ಕೆಲಸ ಆರಂಭಿಸಲಿದೆ ಎಂದು ತಿಳಿಸಲಾಗಿದೆ.
ನಗರದಲ್ಲಿ ಬೀದಿ ಬದಿ, ಮನೆಗಳ ಮುಂಭಾಗ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಟ್ಟಲೇ ವಾಹನಗಳನ್ನು ಪಾರ್ಕ್ ಮಾಡುವ ಸಮಸ್ಯೆ ಹೆಚ್ಚಾಗಿದೆ. ಇದರಿಂದ ಸಂಚಾರಕ್ಕೆ ತೊಂದರೆ ಉಂಟಾಗುತ್ತಿರುವ ಹಿನ್ನೆಲೆ, ಟ್ರಾಫಿಕ್ ಪೊಲೀಸರ ಸಹಯೋಗದಿಂದ ಜಿಬಿಎ ಟೋಯಿಂಗ್ ನಡೆಸಲು ನಿರ್ಧರಿಸಿದೆ.
ನಿಯಮ ವಿರುದ್ಧವಾಗಿ ಪಾರ್ಕ್ ಮಾಡಿದ ವಾಹನಗಳನ್ನು ಟೋಯಿಂಗ್ ಮಾಡಲಾಗುವುದು. ಮೋಟಾರು ವಾಹನ ಕಾಯ್ದೆಯ ಪ್ರಕಾರ ದಂಡ ವಿಧಿಸುವುದರ ಜೊತೆಗೆ, ಫುಟ್‌ಪಾತ್ ಜಾಗ ದುರುಪಯೋಗ ಮಾಡಿದವರಿಗೆ ಜಿಬಿಎ ಪ್ರತ್ಯೇಕವಾಗಿ ದಂಡ ವಿಧಿಸಲಿದೆ ಎಂದು ಮುಖ್ಯ ಆಯುಕ್ತ ಮಹೇಶ್ವರ ರಾವ್ ತಿಳಿಸಿದ್ದಾರೆ.



