ಹೈದರಾಬಾದ್: ಬಸ್ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಪರಿಣಾಮ 9 ಪ್ರಯಾಣಿಕರು ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ಅಲ್ಲೂರಿನಲ್ಲಿ ನಡೆದಿದೆ. ಇಂದು ಬೆಳಗ್ಗೆ ಅರಣ್ಯದ ತಿರುವಿನಲ್ಲಿ ಸಂಚರಿಸುವಾಗ ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದಿದೆ. ಜಿಲ್ಲಾಧಿಕಾರಿಗಳ ಪ್ರಕಾರ ಬಸ್ಸಿನಲ್ಲಿ 35 ಪ್ರಯಾಣಿಕರು, ಇಬ್ಬರು ಚಾಲಕರು ಮತ್ತು ಒಬ್ಬ ಕ್ಲೀನರ್ ಪ್ರಯಾಣಿಸುತ್ತಿದ್ದರು.
ಒಂಬತ್ತು ಜನರು ಸಾವನ್ನಪ್ಪಿದ್ದಾರೆ. ಏಳು ಜನರನ್ನು ಸ್ಥಳದಿಂದ 15 ಕಿ.ಮೀ ದೂರದಲ್ಲಿರುವ ಪ್ರಾಥಮಿಕ ಚಿಕಿತ್ಸಾ ಕೇಂದ್ರಕ್ಕೆ ದಾಖಲಿಸಲಾಗಿದೆ. ಭಾರೀ ಮಂಜಿನಿಂದಾಗಿ ಬಸ್ ಚಾಲಕನಿಗೆ ಅಪಘಾತ ಸ್ಥಳದಲ್ಲಿ ತಿರುವು ಕಾಣಿಸದ ಕಾರಣ ಈ ದುರಂತ ಸಂಭವಿಸಿರುವ ಸಾಧ್ಯತೆಯಿದೆ.
ಚಿತ್ತೂರಿನಿಂದ ತೆಲಂಗಾಣದ ಭದ್ರಾಚಲಂನಲ್ಲಿರುವ ಶ್ರೀರಾಮ ದೇವಸ್ಥಾನಕ್ಕೆ ಪ್ರಯಾಣಿಕರು ತೆರಳುತ್ತಿದ್ದರು. ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದು ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ಮೃತರ ಕುಟುಂಬಕ್ಕೆ 2 ಲಕ್ಷ ರೂ.,ಗಾಯಾಳುಗಳಿಗೆ 50,000 ರೂ. ನೀಡಲಾಗುವುದು ಎಂದು ಪ್ರಕಟಿಸಿದ್ದಾರೆ.



