ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯ ಗುರುವಾರ ಚಂಡೀಗಢದ ಮುಲ್ಲನ್ಪುರದ ಮಹಾರಾಜ ಯಾದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಭಾರತ 51 ರನ್ಗಳಿಂದ ಸೋಲನ್ನು ಕಂಡಿದೆ. ಇನ್ನೂ ಎರಡನೇ ಟಿ20ಐ ಸೋಲಿನ ನಂತರ, ನಾಯಕ ಸೂರ್ಯಕುಮಾರ್ ಯಾದವ್ ಇದನ್ನು ಕಲಿಕೆಯ ಪ್ರಕ್ರಿಯೆ ಎಂದು ಬಣ್ಣಿಸಿದರು.
ಪ್ರಮುಖ ಬ್ಯಾಟ್ಸ್ಮನ್ಗಳಿಂದ ಜವಾಬ್ದಾರಿಯ ಕೊರತೆಯ ಬಗ್ಗೆ ಅವರು ನಿರಾಶೆ ವ್ಯಕ್ತಪಡಿಸಿದ್ದು, ಮುಂದಿನ ಪಂದ್ಯದಲ್ಲಿ ತಂಡವು ಉತ್ತಮ ಪ್ರದರ್ಶನ ನೀಡಲು ಶ್ರಮಿಸುತ್ತೇವೆ ಎಂದು ಹೇಳಿದರು. ನಾವು ಕಲಿಯಬೇಕು ಮತ್ತು ಮುಂದುವರಿಯಬೇಕು ಅಷ್ಟೆ. ಸ್ವಲ್ಪ ಇಬ್ಬನಿ ಬಿದ್ದಿತ್ತು, ಮತ್ತು ನಮ್ಮ ಮೊದಲ ಯೋಜನೆ ಕೆಲಸ ಮಾಡದಿದ್ದರೆ, ನಮಗೆ ಎರಡನೇ ಪ್ಲ್ಯಾನ್ ಇರಬೇಕಿತ್ತು, ಆದರೆ ನಾವು ಅದನ್ನು ಅನುಸರಿಸಲಿಲ್ಲ” ಎಂದು ಸೂರ್ಯಕುಮಾರ್ ಹೇಳಿದರು.
ಎರಡನೇ ಇನ್ನಿಂಗ್ಸ್ನಲ್ಲಿ ದಕ್ಷಿಣ ಆಫ್ರಿಕಾದ ಬೌಲರ್ಗಳು ಹೇಗೆ ಬೌಲಿಂಗ್ ಮಾಡಿದರು ಎಂಬುದನ್ನು ತಾವು ನೋಡಿದ್ದೇವೆ, ಈಗ ಅದರಿಂದ ನಾವು ಕಲಿಯುತ್ತೇವೆ ಮತ್ತು ಮುಂದಿನ ಪಂದ್ಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಪ್ರಯತ್ನಿಸುತ್ತೇವೆ ಎಂದು ಸೂರ್ಯ ಹೇಳಿದರು.
ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ಗಳು ಅಭಿಷೇಕ್ ಶರ್ಮಾ ಅವರ ಮೇಲೆ ಸಂಪೂರ್ಣವಾಗಿ ಅವಲಂಬಿತರಾಗಬಾರದಿತ್ತು ಎಂದು ನಾಯಕ ಒಪ್ಪಿಕೊಂಡಿದ್ದಾರೆ. “ಗಿಲ್ ಮತ್ತು ನಾನು ಉತ್ತಮ ಆರಂಭ ನೀಡಬೇಕಿತ್ತು, ಏಕೆಂದರೆ ನಾವು ಯಾವಾಗಲೂ ಅಭಿಷೇಕ್ ಅವರನ್ನು ಅವಲಂಬಿಸಲು ಸಾಧ್ಯವಿಲ್ಲ. ನಾನು, ಶುಭ್ಮನ್ ಮತ್ತು ಇತರ ಕೆಲವು ಬ್ಯಾಟ್ಸ್ಮನ್ಗಳು ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಗಿತ್ತು” ಎಂದು ಹೇಳಿದರು.



