ಬೆಳಗಾವಿ: ಕಾಂಗ್ರೆಸ್ ಪಕ್ಷದ ಬ್ರೇಕ್ಫಾಸ್ಟ್, ಡಿನ್ನರ್ ಮೀಟಿಂಗ್ ಗಳು ರಾಜ್ಯವನ್ನು ಕುಲಗೆಡಿಸಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಟೀಕಿಸಿದ್ದಾರೆ. ಅವರು ಇಂದು ಇಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದರು. ಕಳೆದ ಮೂರ್ನಾಲ್ಕು ತಿಂಗಳಿನಿಂದ ಡಿನ್ನರ್ ಮೀಟಿಂಗ್ ಮಾಡಿಕೊಂಡು ಬಂದಿದ್ದಾರೆ.
ಇವರ ಡಿನ್ನರ್, ಲಂಚ್ ಮೀಟಿಂಗ್ ಭರಾಟೆಯಲ್ಲಿ ರಾಜ್ಯದ ಆಡಳಿತವನ್ನು ಸಂಪೂರ್ಣವಾಗಿ ಮರೆತಿದ್ದಾರೆ ಎಂದು ಆಕ್ಷೇಪಿಸಿದರು. ಕಬ್ಬು ಬೆಳೆಗಾರರ ಹೋರಾಟವು ವಿಕೋಪಕ್ಕೆ ಹೋಗಲು ಇವರ ಡಿನ್ನರ್ ಮೀಟಿಂಗ್ ಕಾರಣ ಎಂದು ಆರೋಪಿಸಿದರು.
ರಾಜ್ಯದ ರೈತರ ಸಮಸ್ಯೆ ಪರಿಹರಿಸಲು ಇವರು ಯಾವುದೇ ಸಮಯ ಕೊಡಲಿಲ್ಲ. ಡಿನ್ನರ್, ಲಂಚ್ ಮೀಟಿಂಗ್ ನಲ್ಲಿ ರೈತರ ಸಮಸ್ಯೆ ಕುರಿತು ಚರ್ಚಿಸಿಲ್ಲ; ಕೇವಲ ತಮ್ಮ ಮುಖ್ಯಮಂತ್ರಿ ಕುರ್ಚಿ ಉಳಿಸಿಕೊಳ್ಳಲು ಕೆಲವರು ಸಭೆ ನಡೆಸುತ್ತಾರೆ.
ಡಿ.ಕೆ.ಶಿವಕುಮಾರ್ ಅವರ ನೇತೃತ್ವದ ತಂಡದವರು ಹೇಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಕುರ್ಚಿಯಿಂದ ಬೀಳಿಸಬೇಕೆಂದು ಕಾರ್ಯತಂತ್ರದ ಸಭೆ ಮಾಡುತ್ತಿದ್ದಾರೆ ಎಂದರು. ಇದೆಲ್ಲದರ ನಡುವೆ ಆಡಳಿತ ಯಂತ್ರ ಸಂಪೂರ್ಣ ಕುಸಿದು ರೈತರು ಬೀದಿಗೆ ಬರುವಂಥ ಪರಿಸ್ಥಿತಿ ನಿರ್ಮಿಸಿದ್ದಾರೆ ಎಂದು ಆಕ್ಷೇಪಿಸಿದರು. ನಾಯಕತ್ವದ ಗೊಂದಲದ ನಡುವೆ ಚಳಿಗಾಲದ ಅಧಿವೇಶನ ಬೇಡ ಎಂದಿದ್ದೆವು ಎಂದು ತಿಳಿಸಿದರು.



