ಬೆಂಗಳೂರು: ಆನ್‌ಲೈನ್ ಮೂಲಕ ನಡೆಯುವ ಹಣಕಾಸು ವಂಚನೆಗಳಿಗೆ ಸಂಬಂಧಿಸಿದಂತೆ ಬ್ಯಾಂಕ್ ಖಾತೆ ಸ್ಥಗಿತಗೊಳಿಸುವುದು (ಫ್ರೀಜಿಂಗ್), ಹಣ ಮರುಜಮೆ ಸೇರಿದಂತೆ ಸೈಬರ್ ಅಪರಾಧ ಪ್ರಕರಣಗಳನ್ನು ನಿರ್ವಹಿಸಲು ಕರಡು ಪ್ರಮಾಣೀಕೃತ ಕಾರ್ಯಾಚರಣಾ ವಿಧಾನ (ಎಸ್‌ಒಪಿ) ರೂಪಿಸಲಾಗಿದೆ ಎಂದು ಕೇಂದ್ರ ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.
ಸೈಬರ್ ಅಪರಾಧ ಪ್ರಕರಣಗಳಲ್ಲಿ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸುವ ಮುನ್ನ ಖಾತೆದಾರರಿಗೆ ಶೋಕಾಸ್ ನೋಟಿಸ್ ನೀಡುವ ಪ್ರಕ್ರಿಯೆಯನ್ನು ಕಡ್ಡಾಯಗೊಳಿಸುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಪೂಣಚ ಅವರಿದ್ದ ವಿಭಾಗೀಯ ಪೀಠ ನಡೆಸಿತು.
ಈ ವೇಳೆ ಕೇಂದ್ರ ಸರ್ಕಾರದ ಪರ ಉಪ ಸಾಲಿಸಿಟರ್ ಜನರಲ್ ಹೆಚ್. ಶಾಂತಿಭೂಷಣ್ ಹಾಜರಾಗಿ, ನ್ಯಾಷನಲ್ ಸೈಬರ್ ಕ್ರೈಂ ರಿಪೋರ್ಟಿಂಗ್ ಪೋರ್ಟಲ್, ಸಿಟಿಜನ್ ಫೈನಾನ್ಷಿಯಲ್ ಫ್ರಾಡ್ ರಿಪೋರ್ಟಿಂಗ್ (CFCFR), ಮ್ಯಾನೇಜ್‌ಮೆಂಟ್ ಸಿಸ್ಟಮ್ ಮತ್ತು ಪ್ರೋಟೋಕಾಲ್‌ಗಳಿಗೆ ಸಂಬಂಧಿಸಿದಂತೆ ರೂಪಿಸಿರುವ ಕರಡು ಎಸ್‌ಒಪಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.
ಕರಡು ಎಸ್‌ಒಪಿಯನ್ನು ಈಗಾಗಲೇ ಸಂಬಂಧಿಸಿದ ಪಾಲುದಾರರಿಗೆ (ಸ್ಟೇಕ್‌ಹೋಲ್ಡರ್‌ಗಳಿಗೆ) ಹಂಚಲಾಗಿದೆ. ಅವರಿಂದ ಅಗತ್ಯ ಅಭಿಪ್ರಾಯಗಳನ್ನು ಪಡೆದು, ಸೂಕ್ತ ತಿದ್ದುಪಡಿ ಮಾಡಿದ ಬಳಿಕ ಅಂತಿಮಗೊಳಿಸಲಾಗುವುದು ಎಂದು ಕೇಂದ್ರ ಸರ್ಕಾರ ನ್ಯಾಯಪೀಠಕ್ಕೆ ಭರವಸೆ ನೀಡಿತು.
ಈ ಅಂಶವನ್ನು ದಾಖಲಿಸಿಕೊಂಡ ನ್ಯಾಯಪೀಠ, ಸೈಬರ್ ಅಪರಾಧ ನಡೆದ ನಂತರದ ಮೊದಲ ಒಂದು ಗಂಟೆಯ ಅವಧಿ ‘ಗೋಲ್ಡನ್ ಅವರ್’ ಆಗಿರುತ್ತದೆ ಎಂದು ಹೇಳಿತು. ಆ ಸಂದರ್ಭದಲ್ಲಿ ಅಧಿಕಾರಿಗಳಿಂದ ಶೋಕಾಸ್ ನೋಟಿಸ್ ನೀಡುವ ಪ್ರಕ್ರಿಯೆಯನ್ನು ನಿರೀಕ್ಷಿಸಲಾಗುವುದಿಲ್ಲ. ಕ್ರೆಡಿಟ್ ಕಾರ್ಡ್ ದುರುಪಯೋಗವಾಗಿ ಹಣ ವರ್ಗಾವಣೆಯಾದರೆ, ತಕ್ಷಣವೇ ಹಣ ಅಥವಾ ಖಾತೆಯನ್ನು ಸ್ಥಗಿತಗೊಳಿಸುವ ಅಗತ್ಯವಿರುತ್ತದೆ ಎಂದು ತಿಳಿಸಿತು.
ಅಲ್ಲದೆ, ಅಸಹಾಯಕರು, ವಿಶೇಷವಾಗಿ ಹಿರಿಯ ನಾಗರಿಕರ ಖಾತೆಗಳಿಂದ ಎಷ್ಟು ಹಣ ಕಳೆದುಹೋಗಿದೆ ಎಂಬುದನ್ನು ಗಮನಿಸಬೇಕು. ತಮ್ಮ ಜೀವಮಾನದ ಉಳಿತಾಯವನ್ನು ಕಳೆದುಕೊಂಡವರ ದುಃಸ್ಥಿತಿಯನ್ನು ಮನಗಾಣಬೇಕು ಎಂದು ಅರ್ಜಿದಾರರ ಪರ ವಕೀಲರನ್ನು ಉದ್ದೇಶಿಸಿ ನ್ಯಾಯಪೀಠ ಮಾರ್ಮಿಕವಾಗಿ ಅಭಿಪ್ರಾಯಪಟ್ಟಿತು.
ಬ್ಯಾಂಕ್ ಖಾತೆ ಸ್ಥಗಿತಗೊಂಡ ನಂತರ ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಕಾನೂನಿನ ಅಡಿಯಲ್ಲಿ ಸೂಕ್ತ ಪರಿಹಾರ ಕೋರಲು ಸ್ವತಂತ್ರರಾಗಿದ್ದು, ಈ ಆದೇಶವು ಅದಕ್ಕೆ ಯಾವುದೇ ಅಡ್ಡಿಯಲ್ಲ ಎಂದು ಸ್ಪಷ್ಟಪಡಿಸಿ, ನ್ಯಾಯಪೀಠ ಅರ್ಜಿಯನ್ನು ಇತ್ಯರ್ಥಪಡಿಸಿತು.



