ಬೆಂಗಳೂರು: ಇಂದು ಮಧ್ಯಾಹ್ನ ಏಕಾಏಕಿ ಕಾರೊಂದು ಹೊತ್ತಿ ಉರಿದಿರುವ ಘಟನೆ ಬೆಂಗಳೂರಿನ ವಿಜಯನಗರದ ಮುಖ್ಯರಸ್ತೆಯಲ್ಲಿರುವ ಅತ್ತಿಗುಪ್ಪೆ ಮೆಟ್ರೋ ಸ್ಟೇಷನ್ ಸಮೀಪ ನಡೆದಿದೆ. ರಸ್ತೆಯಲ್ಲಿ ಸಂಚರಿಸುತ್ತಿದ್ದ ಒಂದು ಕಾರಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ.
ಕ್ಷಣ ಮಾತ್ರದಲ್ಲಿ ಬೆಂಕಿಯ ಕೆನ್ನಾಲಿಗೆ ಇಡೀ ಕಾರನ್ನು ಆವರಿಸಿದ್ದು, ಕಾರು ಧಗಧಗನೆ ಉರಿಯಲು ಶುರು ಮಾಡಿದೆ. ನಡುರಸ್ತೆಯಲ್ಲೇ ಬೆಂಕಿ ಹೊತ್ತಿಕೊಂಡ ಪರಿಣಾಮ ದಟ್ಟ ಹೊಗೆ ಆವರಿಸಿ ಸುತ್ತಮುತ್ತಲಿದ್ದ ವಾಹನ ಸವಾರರು ಮತ್ತು ಸ್ಥಳೀಯರು ಭೀತಿಗೊಳಗಾಗಿದ್ದರು.
ಕಾರು ಉರಿಯುತ್ತಿದ್ದ ದೃಶ್ಯ ಕಂಡ ಕೂಡಲೇ ಸ್ಥಳೀಯರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಅಗ್ನಿಶಾಮಕ ದಳ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದು ತಕ್ಷಣವೇ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರಿಗೆ ತಗುಲಿದ್ದ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು. ಅಷ್ಟರಲ್ಲಾಗಲೇ ಕಾರು ಬಹುತೇಕ ಸಂಪೂರ್ಣವಾಗಿ ಸುಟ್ಟು ಕರಕಲಾಗಿತ್ತು. ಘಟನಾ ಸ್ಥಳಕ್ಕೆ ವಿಜಯನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.



