ವಿಜಯಸಾಕ್ಷಿ ಸುದ್ದಿ, ಡಂಬಳ: ನಾಗರಿಕರಿಗೆ ಗುರುತಿನ ದಾಖಲೆಯಾದ ಆಧಾರ್ ಕಾರ್ಡ್ ನೋಂದಣಿ, ತಿದ್ದುಪಡಿಗಾಗಿ ಸಾರ್ವಜನಿಕರು ಪರದಾಡುತ್ತಿದ್ದಾರೆ. 20 ಸಾವಿರ ಜನಸಂಖ್ಯೆ ಹೊಂದಿರುವ ಡಂಬಳ ಗ್ರಾಮ ಪಂಚಾಯಿತಿಯಲ್ಲಿ ಮತ್ತು ಡಂಬಳ ಗ್ರಾಮದ ಅಂಚೆ ಕಚೇರಿಯಲ್ಲಿ ಆಧಾರ್ ಸೇವೆ ಇಲ್ಲದೆ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿದೆ.
ಡಂಬಳ ಹೋಬಳಿಯ ಹಳ್ಳಿಕೇರಿ, ಹಳ್ಳಿಗುಡಿ, ಪೇಠಾ ಆಲೂರ, ಡೋಣಿ, ಡೋಣಿ ತಾಂಡ, ಅತ್ತಿಕಟ್ಟಿ ತಾಂಡ, ಹಿರೇವಡ್ಡಟ್ಟಿ, ಚಿಕ್ಕವಡ್ಡಟ್ಟಿ, ಬಸಾಪುರ, ಮುರಡಿ, ಮುರಡಿ ತಾಂಡ ಸೇರಿದಂತೆ ಕಪ್ಪತ್ತಗುಡ್ಡ ಭಾಗದಲ್ಲಿ ಬರುವ ಗ್ರಾಮಗಳ ಗ್ರಾಮಸ್ಥರು ಆಧಾರ್ ಕಾರ್ಡ್ ನೋಂದಣಿ, ತಿದ್ದುಪಡಿಗಾಗಿ ಪರಿತಪಿಸುವಂತಾಗಿದೆ.
ಇ-ಖಾತಾ ಸೌಲಭ್ಯ ಪಡೆಯಲು, ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮತ್ತು ದಾಖಲೆಗಳಿಗೆ ಆಧಾರ್ ಕಾರ್ಡ್ ಪ್ರಮುಖವಾಗಿದ್ದು, ಆಧಾರ್ ಕಾರ್ಡಿನಲ್ಲಿರುವಂತೆ ಎಲ್ಲ ದಾಖಲೆಗಳನ್ನು ಭರ್ತಿ ಮಾಡಬೇಕಾಗಿದೆ. ಅಂದು ಕಂಪ್ಯೂಟರ್ ಆಪರೇಟರ್‌ಗಳು ಮಾಡಿರುವ ತಪ್ಪಿನಿಂದಾಗಿ ಅಥವಾ ಪಾಲಕರು ನೀಡಿರುವ ತಪ್ಪು ಮಾಹಿತಿಯಿಂದಾಗಿ ಆಧಾರ್ ಕಾರ್ಡ್ಗಳಲ್ಲಿ ವ್ಯಕ್ತಿಯ ತಪ್ಪು ಹೆಸರು, ಹುಟ್ಟಿದ ದಿನಾಂಕ, ಮೊಬೈಲ್ ಸಂಖ್ಯೆ, ವಿಳಾಸ, ಅಡ್ಡ ಹೆಸರು ಮುಂತಾದ ಅನೇಕ ದೋಷಗಳು ಕಂಡುಬರುತ್ತವೆ. ಇದನ್ನು ಎಸ್‌ಎಸ್‌ಎಲ್‌ಸಿಯಲ್ಲಿಯೇ ಸರಿಪಡಿಸಿದರೆ ಮಾತ್ರ ಮುಂದಿನ ಸಮಸ್ಯೆ ತಪ್ಪುತ್ತದೆ. ಇಲ್ಲದಿದ್ದರೆ ಅನವಶ್ಯಕವಾಗಿ ಇಲಾಖೆಯಿಂದ ಇಲಾಖೆಗೆ ಅಲೆಯುವ ಸ್ಥಿತಿ ಬರುತ್ತದೆ.
ಉಪತಹಸೀಲ್ದಾರ ಕಚೇರಿಯಲ್ಲಿ ಸರ್ಕಾರದ ವಿಭಾಗದಿಂದ ಆಧಾರ್ ಕಾರ್ಡ್ ನೋಂದಣಿ ಹಾಗೂ ತಿದ್ದುಪಡಿ ವ್ಯವಸ್ಥೆ ಕೆಲ ತಿಂಗಳ ಹಿಂದೆ ಇತ್ತು. ಆದರೆ ಇದೀಗ ಅದನ್ನೂ ಸ್ಥಗಿತಗೊಳಿಸಲಾಗಿದೆ. ಆಧಾರ್ ಕಾರ್ಡ್ ನವೀಕರಣ ಮತ್ತು ಹೊಸ ಕಾರ್ಡ್ ಮಾಡಿಸಲು ಡಂಬಳ ಹೋಬಳಿಯ ಗ್ರಾಮಸ್ಥರು ಹರಸಾಹಸ ಪಡುವಂತಾಗಿದೆ. ಈ ಸಮಸ್ಯೆ ಪರಿಹರಿಸಲು ಅಧಿಕಾರಿಗಳು ತಕ್ಷಣ ಡಂಬಳ ಗ್ರಾಮ ಅಂಚೆ ಕಚೇರಿ ಅಥವಾ ಡಂಬಳ ಗ್ರಾಮ ಪಂಚಾಯಿತಿ, ಉಪತಹಸೀಲ್ದಾರ ಕಚೇರಿಯಲ್ಲಿ ಆಧಾರ್ ಕೇಂದ್ರ ಪ್ರಾರಂಭಿಸುವ ಕ್ರಮ ಕೈಗೊಳ್ಳಬೇಕಿದೆ.
ಡಂಬಳ 20 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇರುವ ಗ್ರಾಮವಾಗಿದೆ ಮತ್ತು ಗುಡ್ಡಗಾಡು ಪ್ರದೇಶವುಳ್ಳ ಗ್ರಾಮಗಳಿಗೆ ಡಂಬಳ ಗ್ರಾಮ ಸಮೀಪವಿದ್ದು, ಆಧಾರ್ ನೋಂದಣಿ ಕೇಂದ್ರದ ಅವಶ್ಯಕತೆಯಿದೆ. ಶೀಘ್ರದಲ್ಲಿಯೇ ಡಂಬಳದಲ್ಲಿ ಆಧಾರ್ ನೋಂದಣಿ/ತಿದ್ದುಪಡಿ ಕೇಂದ್ರ ತೆರೆಯಬೇಕು.
-
ವಿನಾಯಕ ಕಟ್ಟೆಣ್ಣವರ.
ಸಾಮಾಜಿಕ ಹೋರಾಟಗಾರ, ಡಂಬಳ.



