ತೆರೆ ಕಾಣಲು ತುದಿಗಾಲಲ್ಲಿರುವ ಬಿಗ್ ಸಿನಿಮಾಗಳು
-ಶೇಕಡಾ 100 ಆಸನ ಭರ್ತಿಗೆ ಅವಕಾಶ ಕೊಡಿ
-19 ತಿಂಗಳಿನಿಂದ ಥೇಟರ್ ಸಂಕಷ್ಟ
–ಬಸವರಾಜ ಕರುಗಲ್,
ವಿಜಯಸಾಕ್ಷಿ ವಿಶೇಷ, ಬೆಂಗಳೂರು
ಕೋವಿಡ್ ದಿನಗಳು ಬಂದು ಹಲವರ ಬದುಕು, ಉದ್ಯೋಗವನ್ನೇ ಕಸಿದಿವೆ. ಕೋವಿಡ್‌ನಿಂದಾಗಿ ಅಲ್ಲದೇ ನಂತರದ ದಿನಗಳಲ್ಲಿ ದುಡಿಮೆ ಇಲ್ಲದೇ ಜೀವನ ಹೇಗೆ ಎಂದು ಆತಂಕಕ್ಕೊಳಗಾಗಿ ಪ್ರಾಣ ಕಳೆದುಕೊಂಡವರ ಸಂಖ್ಯೆಗೇನು ಕಡಿಮೆ ಇಲ್ಲ. ಇಂಥ ಆತಂಕದ ಮಡುವಿನಲ್ಲೇ ಇನ್ನೂ ಉಸಿರು ಬಿಗಿ ಹಿಡಿದಿರುವ ಸ್ಥಿತಿ ಚಿತ್ರರಂಗದ್ದು.
ಸರಿ ಸುಮಾರು 19 ತಿಂಗಳಿನಿಂದ ಭಾರತದ ಚಿತ್ರಮಂದಿರಗಳಿಗೆ ಬೀಗ ಬಿದ್ದಿದೆ. 2021ರ ಜನೇವರಿಯಲ್ಲಿ ಪುನಾರಂಭಗೊಂಡಿದ್ದ ಚಿತ್ರರಂಗ ಇನ್ನೇನು ಚೇತರಿಕೆ ಕಾಣಬೇಕೆನ್ನುವಷ್ಟರಲ್ಲಿ ಮತ್ತೇ ಸ್ಥಗಿತವಾಯಿತು. ಅದು ಅನಿವಾರ್ಯವೂ ಆಗಿತ್ತು.
ಆದರೆ ಈಗ ಕೋವಿಡ್ ಚಿತ್ರಣ ಬದಲಾಗಿದೆ. ವಿಶೇಷವಾಗಿ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಗಣನೀಯವಾಗಿ ಇಳಿಕೆ ಕಂಡಿದ್ದರಿಂದ ಹಂತ ಹಂತವಾಗಿ ವಿವಿಧ ಚಟುವಟಿಕೆಗಳು ಕಾರ್ಯಾರಂಭ ಮಾಡಿವೆ.
ರಾಜ್ಯದಲ್ಲಿ ಶಾಲಾ-ಕಾಲೇಜುಗಳು ಆರಂಭಗೊಂಡಿವೆ. ಅಂಗಡಿ-ಮುಂಗಟ್ಟುಗಳು, ಬಾರ್-ರೆಸ್ಟೋರೆಂಟ್‌ಗಳು ಬಾಗಿಲು ತೆರೆದಿವೆ. ಬಸ್ ಸಂಚಾರ ಮತ್ತೇ ಎಂದಿನ ಲಯಕ್ಕೆ ಮರಳಿದೆ. ಗಣೇಶೋತ್ಸವವೂ ಕೋವಿಡ್‌ಗೂ ಹಿಂದಿನ ವರ್ಷಗಳಿಗೆ ಸವಾಲೊಡ್ಡುವ ರೀತಿಯಲ್ಲಿ ನಡೆಯುತ್ತಿದೆ. ಆದರೆ ಚಿತ್ರೋದ್ಯಮ ಮಾತ್ರ ಕಸುವು ಕಳೆದುಕೊಂಡಂತಾಗಿದೆ.
ಬಸ್‌ನಲ್ಲಿ ಆಸನ ಭರ್ತಿಗೆ ಅವಕಾಶ ಇದೆ, ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳು, ಹೋಟೆಲ್‌ಗಳು ಜನರಿಂದ ಭರ್ತಿಯಾಗಿ ಭರ್ಜರಿ ವ್ಯಾಪಾರ ಮಾಡುತ್ತಿವೆ. ಸಿನಿಮಾ ಥೇಟರ್ ವಿಷಯಕ್ಕೆ ಬಂದರೆ ಮಾತ್ರ ಸರಕಾರ ಕೋವಿಡ್ ಕಾರಣವನ್ನು ಮುಂದೊಡ್ಡುವುದು ಎಷ್ಟರಮಟ್ಟಿಗೆ ಸರಿ ಎನ್ನುವುದು ಚಿತ್ರರಂಗಗ ನಾನಾ ಶಾಖೆಗಳಲ್ಲಿ ಕೆಲಸ ಮಾಡುತ್ತಿರುವವರ ಅಭಿಪ್ರಾಯ.
ಸರಕಾರದ ಈ ತಾರತಮ್ಯ ನೀತಿಯಿಂದ ಬರೀ ಸಿನಿಮಾ ಕಾರ್ಮಿಕರ ಬದುಕಿಗೆ ಪೆಟ್ಟು ಬಿದ್ದಿಲ್ಲ. ಚಿತ್ರಮಂದಿರಗಳ ಮಾಲಕರು, ಪ್ರದರ್ಶಕರು, ವಿತರಕರು, ನಿರ್ಮಾಪಕರು.. ಹೀಗೆ ಚಿತ್ರರಂಗದ ಎಲ್ಲ ವಿಭಾಗದವರಿಗೂ ಹೊಡೆತ ಬಿದ್ದಿದೆ.
ಪರಿಹಾರ ಪಡೆಯಲು ನಿಯಮಗಳದ್ದೇ ಸವಾಲು!
ಸರಕಾರ ಎಲ್ಲ ಕಾರ್ಮಿಕರಿಗೂ ಕೋವಿಡ್ ಪರಿಹಾರ ಒದಗಿಸಲು ಮುಂದಾಗಿದ್ದು ಶ್ಲಾಘನೀಯವೇ. ಇದರಲ್ಲಿ ಚಿತ್ರರಂಗದ ಕಾರ್ಮಿಕರನ್ನು ಸೇರ್ಪಡೆ ಮಾಡಿದ್ದು ಸ್ವಾಗತಾರ್ಹ ಸಂಗತಿ. ಆದರೆ ಪರಿಹಾರ ಪಡೆಯಲು ಸರಕಾರ ವಿಧಿಸಿರುವ ನಿಯಮಗಳನ್ನು ಗಮನಿಸಿದರೆ ನೂರು ಜನರಲ್ಲಿ ಐದಾರು ಜನ ಮಾತ್ರ ಈ ಪರಿಹಾರದ ಫಲ ಪಡೆಯುತ್ತಾರೆ. ಇನ್ನುಳಿದವರು ಸರಕಾರ ಕೊಡುವ ಪರಿಹಾರ ಧನದ ಅರ್ಧಭಾಗವನ್ನು ನಿಯಮಗಳ ಪಾಲನೆಗೆ ಸುರಿಯಬೇಕಾಗುತ್ತದೆ ಎಂದು ಚಿತ್ರಮಂದಿರದ ದ್ವಾರಪಾಲಕ ವಿಜಯಸಾಕ್ಷಿ ಎದುರು ಅಳಲು ತೋಡಿಕೊಂಡರು.
“ರಾಜ್ಯದಲ್ಲಿ ಬಸ್, ಟೆಂಪೋ, ಟ್ರಕ್ ಭರ್ತಿಯಾಗಿ ಓಡಾಡುತ್ತಿವೆ. ಅಲ್ಲಿ ಉಲ್ಲಂಘನೆಯಾಗದ ಕೋವಿಡ್ ನಿಯಮ ಚಿತ್ರಮಂದಿರಗಳ ಆಸನ ಭರ್ತಿಗೆ ಅವಕಾಶ ಕೊಟ್ಟರೆ ಆಗುತ್ತಾ? ಎಲ್ಲರಿಗೂ ಅವಕಾಶ ಕೊಟ್ಟಿರುವಂತೆ ಚಿತ್ರಮಂದಿರಗಳ ಭರ್ತಿಗೆ ಅವಕಾಶ ಕೊಡಿ. ಈಗ ಕೊರೊನಾ ನಿಯಂತ್ರಣದಲ್ಲಿದೆ. ಚಿತ್ರೋದ್ಯಮದ ಚಟುವಟಿಕೆ ನಂಬಿಕೊಂಡು ಸಾವಿರಾರು ಕುಟುಂಬಗಳು ಬದುಕುತ್ತಿವೆ. ದೊಡ್ಡ ದೊಡ್ಡ ಸಿನಿಮಾಗಳು ತೆರೆಗೆ ಬರಲು ತುದಿಗಾಲಲ್ಲಿವೆ. ಸರಕಾರದ ವಿರುದ್ಧ ಹೋಗಬಾರದು ಎನ್ನುವ ಕಾರಣಕ್ಕೆ ಬಿಗ್ ಸಿನಿಮಾಗಳು ತೆರೆಗೆ ಬಂದಿಲ್ಲ. ಸರಕಾರ ಚಿತ್ರಮಂದಿರಗಳಲ್ಲಿ ಶೇಕಡಾ 100 ಆಸನ ಭರ್ತಿಗೆ ಅವಕಾಶ ಕೊಡಲಿ. ಒಂದೊಮ್ಮೆ ಕೋವಿಡ್ ಪ್ರಕರಣಗಳಲ್ಲಿ ಹೆಚ್ಚಳ ಕಂಡು ಬಂದರೆ ಎಲ್ಲವನ್ನು ಬಂದ್ ಮಾಡುವಂತೆ ಚಿತ್ರಮಂದಿರಗಳನ್ನು ಬಂದ್ ಮಾಡಲು ಸೂಚಿಸಲಿ. ಯಾರು ಬೇಡ ಅಂತಾರೆ?”
ಆರ್ ಆರ್ ಓದುಗೌಡರ್, ಅಧ್ಯಕ್ಷರು, ಕರ್ನಾಟಕ ಚಲನಚಿತ್ರ ಪ್ರದರ್ಶಕರ ಮಹಾಮಂಡಳಿ
“ಸರಕಾರದ ಈ ತಾರತಮ್ಯ ನೀತಿಯಿಂದ ಚಿತ್ರಮಂದಿರಗಳ ಮಾಲಕರು ಚಿಂತಾಕ್ರಾಂತರಾಗಿದ್ದಾರೆ. ಸರಕಾರ ಕೆಲವು ತೆರಿಗೆ ಶುಲ್ಕ, ವಿದ್ಯುತ್ ಬಿಲ್ ಪಾವತಿ ಸೇರಿದಂತೆ ಕೆಲ ವಿನಾಯಿತಿಗಳನ್ನು ಕೊಟ್ಟದ್ದು ನಿಜ. ಆದರೆ ಈಗಲೂ ಚಿತ್ರಮಂದಿರಗಳ ಭರ್ತಿಗೆ ಅವಕಾಶ ಕೊಡದಿದ್ದರೆ ಥೇಟರ್ ನಡೆಸೋದಾದರೂ ಹೇಗೆ?”
ವಿಶ್ವನಾಥ್ ಮಹಾಂತಯ್ಯನಮಠ, ಮಾಲಕರು, ಶ್ರೀ ಲಕ್ಷ್ಮೀ ಹಾಗೂ ಶಿವ ಚಿತ್ರಮಂದಿರ, ಕೊಪ್ಪಳ.