ವಿಜಯಸಾಕ್ಷಿ ಸುದ್ದಿ, ಗದಗ: ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರ, ಸಂಸ್ಥೆಗಳ ಉಳಿವಿಗಾಗಿ ಸರಕಾರ ನೀಡಿದ ಭರವಸೆಯನ್ನು ಈಡೇರಿಸಬೇಕು, ಹಳೇ ಪಿಂಚಣಿಯನ್ನು ಶೀಘ್ರ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಡಿ. 17ರಂದು ಬೃಹತ್ ಪ್ರತಿಭಟನಾ ಮೆರವಣಿಗೆ ಕೈಗೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ಉಪನ್ಯಾಸಕರ, ಪದವೀದರ ಹಾಗೂ ಶಿಕ್ಷಕರ ಟ್ರಸ್ಟ್ನ ರಾಜ್ಯಾಧ್ಯಕ್ಷ ಪ್ರೊ. ಉಮೇಶ ಹಿರೇಮಠ ಹೇಳಿದರು.
ಸೋಮವಾರ ಗದಗಿನಲ್ಲಿ ಬೆಳಗಾವಿ ಚಲೋ ಹೋರಾಟದ ಅಂತಿಮ ಸಿದ್ಧತೆಯ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಹು ವರ್ಷದ ಬೇಡಿಕೆಯಾಗಿ ಉಳಿದಿರುವ ಹಾಗೂ ಸದ್ಯ ಆಡಳಿತ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬರುವ ಮುನ್ನ ಈ ಕುರಿತು ಆಶ್ವಾಸನೆ ನೀಡಿತ್ತು. ನೌಕರರು ಮತ್ತು ಶಿಕ್ಷಣ ಸಂಸ್ಥೆಗಳು ಸರ್ಕಾರ ಈ ಭರವಸೆಗಳನ್ನು ಈಡೇರಿಸಬಹುದೆಂದು ಇಲ್ಲಿಯವರೆಗೂ ಕಾಯುತ್ತ ಬಂದಿದೆ. ಆಗಾಗ ಮನವಿ ಸಲ್ಲಿಸುತ್ತ, ಹೋರಾಟ, ಪ್ರತಿಭಟನೆ ಮಾಡುತ್ತ ಬಂದಿದ್ದರೂ ಸಹ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಿರುವುದನ್ನು ಪ್ರತಿಭಟಿಸಿ ಬೆಳಗಾವಿಯಲ್ಲಿ ಡಿ. 17ರಂದು ರಾಜ್ಯ ಮಟ್ಟದಲ್ಲಿ ಬೃಹತ್ ಪ್ರತಿಭಟನೆ ಕೈಗೊಳ್ಳಲು ಮುಂದಾಗಿದೆ ಎಂದರು.
ಒಂದು ವೇಳೆ ಸರ್ಕಾರ ನಮ್ಮ ಬೇಡಿಕೆಯನ್ನು ಅಧಿವೇಶನದಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳದಿದ್ದಲ್ಲಿ ರಾಜ್ಯದಾದ್ಯಂತ ಉಗ್ರ ಪ್ರತಿಭಟನೆ ಕೈಗೊಳ್ಳಲಾಗುವುದು. ಅಲ್ಲದೆ ಪರಿಸ್ಥಿತಿಯನ್ನು ಅವಲೋಕಿಸಿ ರಾಜ್ಯಪಾಲರಿಗೆ ದಯಾಮರಣಕ್ಕಾಗಿ ಮನವಿ ಸಲ್ಲಿಸಿ ಹೋರಾಟದ ಸ್ವರೂಪವನ್ನು ಇನ್ನಷ್ಟು ತೀವ್ರಗೊಳಿಸುವುದಾಗಿ ಹೇಳಿದರು.
ಕರ್ನಾಟಕ ರಾಜ್ಯ ಉಪನ್ಯಾಸಕರ, ಪದವೀಧರ ಹಾಗೂ ಶಿಕ್ಷಕರ ಟ್ರಸ್ಟ್ನ ಗೌರವಾಧ್ಯಕ್ಷ ರವೀಂದ್ರನಾಥ ಬಿ.ದಂಡಿನ, ಗದಗ ಜಿಲ್ಲಾ ಮಾಧ್ಯಮಿಕ ನೌಕರರ ಸಂಘದ ಅಧ್ಯಕ್ಷ ಎಂ.ಕೆ. ಲಮಾಣಿ ಹೋರಾಟದ ರೂಪುರೇಷೆಗಳನ್ನು ವಿವರಿಸಿದರು ಎಂದು ಗದಗ ಜಿಲ್ಲಾ ಮಾಧ್ಯಮಿಕ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಎಸ್. ಪಾಟೀಲ ತಿಳಿಸಿದ್ದಾರೆ.
ಡಿ. 17 ರಂದು ಬುಧವಾರ ಮುಂಜಾನೆ ಬೆಳಗಾವಿಯ ಹಳೇ ಪಿ.ಬಿ. ರೋಡ್, ಧಾರವಾಡ ನಾಕಾದಲ್ಲಿ ರಾಜ್ಯದ ವಿವಿಧ ಜಿಲ್ಲೆ, ತಾಲೂಕುಗಳಿಂದ ನೌಕರರು ಮತ್ತು ಶಿಕ್ಷಣ ಸಂಸ್ಥೆಯ ಪದಾಧಿಕಾರಿಗಳು ಸಂಘಟಿತರಾಗುವರು. ಗದಗ ಜಿಲ್ಲೆಯಿಂದಲೂ ಹೆಚ್ಚಿನ ಬಂಧುಗಳು ಪಾಲ್ಗೊಳ್ಳುವರು ಎಂದು ಪ್ರೊ.ಉಮೇಶ ಹಿರೇಮಠ ತಿಳಿಸಿದರು.



