ನವದೆಹಲಿ: ದೆಹಲಿಯ ಜಂತರ್ ಮಂತರ್‌ನಲ್ಲಿ ಕಳೆದ 20 ದಿನಗಳಿಂದ ನಿರಂತರ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ (59) ಅವರನ್ನು ದೆಹಲಿ ಪೊಲೀಸರು ಶನಿವಾರ ಸಫ್ದರ್ಜಂಗ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಬೆಳವಣಿಗೆಯ ಬೆನ್ನಲ್ಲೇ ಅವರ ಪತ್ನಿ ಗೀತಾಂಜಲಿ ಜೆ. ಆಂಗ್ಮೋ ಆಸ್ಪತ್ರೆ ಆಡಳಿತಕ್ಕೆ ಸಾರ್ವಜನಿಕವಾಗಿ ಎಚ್ಚರಿಕೆ ನೀಡಿ, ಕುಟುಂಬದ ಅನುಮತಿಯಿಲ್ಲದೆ ಯಾವುದೇ ಚಿಕಿತ್ಸೆ ನೀಡಬಾರದು ಎಂದು ಆಗ್ರಹಿಸಿದ್ದಾರೆ.
ಎಕ್ಸ್ (X) ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಗೀತಾಂಜಲಿ, ತಾವು ಸಫ್ದರ್ಜಂಗ್ ಆಸ್ಪತ್ರೆಯಲ್ಲೇ ಇರುವುದಾಗಿ ತಿಳಿಸಿದ್ದು, ಕಳೆದ 20 ದಿನಗಳಿಂದ ವಾಂಗ್ಚುಕ್ ಅವರ ಆರೋಗ್ಯವನ್ನು ಮೇಲ್ವಿಚಾರಣೆ ಮಾಡುತ್ತಿರುವ ವೈದ್ಯರು ಹಾಗೂ ಕುಟುಂಬದ ಲಿಖಿತ ಒಪ್ಪಿಗೆಯಿಲ್ಲದೆ ಮಾತ್ರೆ, ಡ್ರಿಪ್ಸ್ ಅಥವಾ ಯಾವುದೇ ಔಷಧ ನೀಡಬಾರದು ಎಂದು ಹೇಳಿದ್ದಾರೆ.
“ನನ್ನ ಗಮನಕ್ಕೆ ತರದೆ ಯಾವುದೇ ರೀತಿಯ ಚಿಕಿತ್ಸೆ ನೀಡಬಾರದು. ಸಂವಿಧಾನದ ಆರ್ಟಿಕಲ್ 32 ಅಡಿಯಲ್ಲಿ ನನ್ನ ಪತಿಯ ಆರೋಗ್ಯ ಹಕ್ಕನ್ನು ರಕ್ಷಿಸುವ ಅಧಿಕಾರ ನನಗಿದೆ” ಎಂದು ಅವರು ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಇದೇ ವೇಳೆ, “ನಿನ್ನೆ ರಾತ್ರಿವರೆಗೂ ನನ್ನ ಪತಿ ಆರೋಗ್ಯವಾಗಿಯೇ ಇದ್ದರು. ಅವರನ್ನು ಬಲವಂತವಾಗಿ ಆಸ್ಪತ್ರೆಗೆ ಸ್ಥಳಾಂತರಿಸುವಂತಹ ಯಾವುದೇ ತುರ್ತು ಪರಿಸ್ಥಿತಿ ಇರಲಿಲ್ಲ” ಎಂದು ಗೀತಾಂಜಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನೊಂದೆಡೆ, ವಾಂಗ್ಚುಕ್ ಅವರ ಆರೋಗ್ಯ ಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ವೈದ್ಯರ ಸಲಹೆ ಮತ್ತು ನ್ಯಾಯಾಲಯದ ನಿರ್ದೇಶನದಂತೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ದೆಹಲಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಪ್ರಕರಣ ಇದೀಗ ವೈದ್ಯಕೀಯ ಚಿಕಿತ್ಸೆ, ಪ್ರತಿಭಟನೆ ಮತ್ತು ವ್ಯಕ್ತಿಯ ಹಕ್ಕುಗಳ ಕುರಿತು ಹೊಸ ಚರ್ಚೆಗೆ ಕಾರಣವಾಗಿದೆ.



