ಬೆಂಗಳೂರು:- ಕಳೆದ ಒಂದು ವಾರದಿಂದ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ತೀವ್ರ ಚಳಿ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ.
ವಿಪರೀತ ಚಳಿಯಿಂದ ಜನರು ನಿದ್ದೆಗೆಡುತ್ತಿರುವ ನಡುವೆ, ಉತ್ತರ ಒಳನಾಡಿನ ಎಲ್ಲಾ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಶೀತಗಾಳಿ ಎಚ್ಚರಿಕೆ ನೀಡಿದೆ. ಕನಿಷ್ಠ ತಾಪಮಾನದಲ್ಲಿ ಕಂಡುಬರುವ ಈ ಇಳಿಕೆಗೆ ಪೆಸಿಫಿಕ್ ಮಹಾಸಾಗರದಲ್ಲಿನ ಲ್ಯಾನಿನೋ ಪರಿಣಾಮವೇ ಪ್ರಮುಖ ಕಾರಣವಾಗಿದೆ. ಲ್ಯಾನಿನೋ ಎನ್ನುವುದು ಪೆಸಿಫಿಕ್ ಮಹಾಸಾಗರದ ಮೇಲ್ಮೈ ಉಷ್ಣಾಂಶ ಸಾಮಾನ್ಯಕ್ಕಿಂತ ಕಡಿಮೆಯಾಗುವ ಹವಾಮಾನ ಸ್ಥಿತಿಯಾಗಿದೆ.
ಕಲ್ಯಾಣ ಕರ್ನಾಟಕದ ಬೀದರ್, ಕಲಬುರಗಿ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ನಾಳೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಇಲ್ಲಿ ಚಳಿಯ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ಉಳಿದ ಕಲ್ಯಾಣ ಕರ್ನಾಟಕ ಜಿಲ್ಲೆಗಳ ಜೊತೆಗೆ ಉತ್ತರ ಮತ್ತು ಮಧ್ಯ ಕರ್ನಾಟಕದ ಬಹುತೇಕ ಭಾಗಗಳಲ್ಲೂ ಜನರು ತೀವ್ರ ಚಳಿಯನ್ನು ಅನುಭವಿಸುವ ಸಾಧ್ಯತೆ ಇದೆ. ಉತ್ತರ ಒಳನಾಡಿನ ಬೆಳಗಾವಿ, ಬಾಗಲಕೋಟೆ, ಬಳ್ಳಾರಿ, ವಿಜಯನಗರ, ಯಾದಗಿರಿ, ರಾಯಚೂರು, ಗದಗ, ಧಾರವಾಡ, ಹಾವೇರಿ ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ಒಣ ಹವಾಮಾನ ಅಥವಾ ಸಾಧಾರಣ ಚಳಿ ಮುಂದುವರಿಯಲಿದೆ.
ಇನ್ನೂ ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ವಿಜಯನಗರ ಹಾಗೂ ಕೊಡಗು ಜಿಲ್ಲೆಗಳಲ್ಲಿಯೂ ಚಳಿಯ ಅನುಭವ ಹೆಚ್ಚಾಗಲಿದೆ.
ನಿನ್ನೆ ಬೆಳಿಗ್ಗೆ 8.30ರಿಂದ ಇಂದು ಬೆಳಿಗ್ಗೆ 8.30ರವರೆಗೆ ದಾಖಲಾಗಿರುವ ಕನಿಷ್ಠ ತಾಪಮಾನದಲ್ಲಿ ಬೀದರ್ನಲ್ಲಿ 11 ಡಿಗ್ರಿ ಸೆಲ್ಸಿಯಸ್ ಅತಿ ಕಡಿಮೆಯಾಗಿ ದಾಖಲಾಗಿದೆ. ಬೆಳಗಾವಿ 13 ಡಿಗ್ರಿ, ಬಾಗಲಕೋಟೆ 13.8, ಧಾರವಾಡ 13.2, ಹಾಸನ 12.8, ಚಿಕ್ಕಮಗಳೂರು 13.4, ಕಲಬುರಗಿ 12.3, ವಿಜಯನಗರ 12.9 ಡಿಗ್ರಿ ಸೆಲ್ಸಿಯಸ್ ಸೇರಿದಂತೆ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ತಾಪಮಾನವು ಗಣನೀಯವಾಗಿ ಕುಸಿದಿದೆ. ಬೆಂಗಳೂರು ನಗರದಲ್ಲಿ ಕನಿಷ್ಠ ತಾಪಮಾನ 15.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಮುಂದಿನ ದಿನಗಳಲ್ಲೂ ಚಳಿ ಮುಂದುವರಿಯುವ ಸಾಧ್ಯತೆ ಇದೆ.



