ಕೋಲಾರ: ಕಾರು ಗ್ಯಾರೇಜ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡು ಐದು ಕಾರುಗಳಿಗೆ ಹಾನಿಯಾಗಿರುವ ಘಟನೆ ಬಂಗಾರಪೇಟೆ ತಾಲೂಕಿನ ಎಸ್.ಜಿ ಕೋಟೆ ಸಮೀಪ ನಡೆದಿದೆ.
ಈರಣ್ಣ ಅವರಿಗೆ ಸೇರಿದ ಚೌಡೇಶ್ವರಿ ಕಾರ್ ಸರ್ವಿಸ್ ಸೆಂಟರ್‌ನಲ್ಲಿ ಕಳೆದ ರಾತ್ರಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿದ್ದು, ಗ್ಯಾರೇಜ್ ಒಳಗೆ ನಿಲ್ಲಿಸಿದ್ದ 3 ಕಾರುಗಳು ಸಂಪೂರ್ಣವಾಗಿ ಭಸ್ಮವಾಗಿವೆ. ಹೊರಗೆ ನಿಲ್ಲಿಸಿದ್ದ ಇನ್ನೂ 2 ಕಾರುಗಳಿಗೆ ಭಾಗಶಃ ಹಾನಿಯಾಗಿದೆ.
ಘಟನೆಯ ವೇಳೆ ಸರ್ವಿಸ್ ಸೆಂಟರ್‌ನಲ್ಲಿ ಕೆಲಸಗಾರರು ಇಲ್ಲದಿದ್ದ ಕಾರಣ ಯಾವುದೇ ಜೀವಹಾನಿ ಸಂಭವಿಸಿಲ್ಲ. ಆದರೆ ಲಕ್ಷಾಂತರ ರೂಪಾಯಿ ಮೌಲ್ಯದ ವಾಹನಗಳು ಹಾಗೂ ಆಸ್ತಿಪಾಸ್ತಿ ನಾಶವಾಗಿದೆ ಎಂದು ಅಂದಾಜಿಸಲಾಗಿದೆ.
ಅಗ್ನಿ ಅವಘಡದ ಮಾಹಿತಿ ದೊರೆತ ತಕ್ಷಣ ಬಂಗಾರಪೇಟೆ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದೆ. ಸ್ಥಳಕ್ಕೆ ಬಂಗಾರಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.



