ಬೆಂಗಳೂರು: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಒಡೆತನದ ಐಷಾರಾಮಿ ಪಬ್ ಮೇಲೆ ಇಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ಕೈಗೊಂಡಿದ್ದಾರೆ.
ಬೆಂಗಳೂರಿನ ಚರ್ಚ್ ಸ್ಟ್ರೀಟ್‌ನಲ್ಲಿರುವ ಜನಪ್ರಿಯ ಬ್ಯಾಸ್ಟಿಯನ್ ಪಬ್ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ಹಣಕಾಸು ಹಾಗೂ ಇತರ ಪ್ರಮುಖ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಈ ದಾಳಿಯ ನಿಖರ ಕಾರಣ ಇನ್ನಷ್ಟೇ ಸ್ಪಷ್ಟವಾಗಬೇಕಿದೆ.
ಶಿಲ್ಪಾ ಶೆಟ್ಟಿ ಹಾಗೂ ಅವರ ಪತಿ ಈಗಾಗಲೇ ಹಲವು ಪ್ರಕರಣಗಳಲ್ಲಿ ವಿಚಾರಣೆಯನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ, ಈ ಐಟಿ ದಾಳಿಯು ಆ ಹಿಂದಿನ ಪ್ರಕರಣಗಳ ಮುಂದುವರಿದ ಭಾಗವೇ ಅಥವಾ ಪಬ್‌ಗೆ ಸಂಬಂಧಿಸಿದ ಇತರ ವಿವಾದಗಳಿಗೆ ಸಂಬಂಧಿಸಿದ್ದೇ ಎಂಬ ಪ್ರಶ್ನೆಗಳು ಮೂಡಿವೆ.
ಬ್ಯಾಸ್ಟಿಯನ್ ಪಬ್ ಬೆಂಗಳೂರು ನಗರದಲ್ಲಿನ ಅತ್ಯಂತ ದುಬಾರಿ ಹಾಗೂ ಜನಪ್ರಿಯ ಪಬ್‌ಗಳಲ್ಲಿ ಒಂದಾಗಿದ್ದು, ದಾಳಿಯ ವೇಳೆ ಐಟಿ ಅಧಿಕಾರಿಗಳು ಸ್ಥಳದಲ್ಲೇ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.



