ಬೆಂಗಳೂರು:- ಕಂದಾಯ ಸಚಿವ ಕೃಷ್ಣಭೈರೇಗೌಡ ವಿರುದ್ಧ 21 ಎಕರೆ ಜಮೀನು ಕಬಳಿಕೆ ಆರೋಪ ಕೇಳಿಬಂದಿದೆ.
ಕೋಲಾರ ಜಿಲ್ಲೆಯ ನರಸಪುರ ಹೋಬಳಿ ಗರುಡನಪಾಳ್ಯದಲ್ಲಿ 21 ಎಕರೆ ಜಮೀನು ಕಬಳಿಸಿದ್ದಾರೆ. ನಕಲಿ ದಾಖಲೆ ಸೃಷ್ಟಿ ಮಾಡಿ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆಂದು ವಿಪಕ್ಷ ನಾಯಕರು ಗಂಭೀರ ಆರೋಪ ಮಾಡಿದ್ದು, ಈ ಸಂಬಂಧ ಬೆಳಗಾವಿಯಲ್ಲಿಂದು ಬಿಜೆಪಿ ಮುಖಂಡ ತಮ್ಮೇಶ ಗೌಡ, ಕೃಷ್ಣಭೈರೇಗೌಡರು ನಕಲಿ ದಾಖಲೆ ಸೃಷ್ಟಿಸಿ ಭೂ ಕಬಳಿಸಿರುವುದಕ್ಕೆ ಕೆಲ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.
ಬಳಿಕ ಮಾತನಾಡಿದ ಅವರು, ನಕಲಿ ದಾಖಲೆ ಸೃಷ್ಟಿಸಿ ಕಂದಾಯ ಸಚಿವರು ಖರಾಬ್ ಜಮೀನನ್ನು ಅವರ ಹೆಸರಿಗೆ ಮಾಡಿಕೊಂಡಿದ್ದಾರೆ.ಸರ್ಕಾರಿ ಜಮೀನು ಉಳಿಸಲು ಹೋರಾಟ ಮಾಡುತ್ತೇವೆ ಎಂದು ಹೇಳುವ ಅವರ ನಿಯತ್ತು ಏನು ಎಂಬುದು ಈಗ ಹೊರಗೆ ಬಂದಿದೆ. ಮೂಲ ದಾಖಲೆಗಳೇ ಫೋರ್ಜರಿ ಮಾಡಿ ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ. ಕಂದಾಯ ಸಚಿವರು ಯಾವ ರೀತಿ ಪ್ರಭಾವ ಬಳಸಿದರು? ಕಂದಾಯ ಸಚಿವರು ಆ ಸ್ಥಾನದಲ್ಲಿ ಇರಲು ಯೋಗ್ಯತೆ, ಅರ್ಹತೆ ಇದೆಯಾ? ಸ್ವಜನಪಕ್ಷಪಾತದಲ್ಲಿ ಇರಬೇಕಾದರೆ ಅವರು ಆ ಸ್ಥಾನದಲ್ಲಿ ಮುಂದುವರಿಯಲು ಅರ್ಹರಾ? ಹೀಗಾಗಿ ಕೃಷ್ಣ ಭೈರೇಗೌಡ ಅವರು ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದರು.
ಬಳಿಕ ಮಾತನಾಡಿದ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಕೋಲಾರ ಜಿಲ್ಲೆಯ ನರಸಪುರ ಹೋಬಳಿ ಗರುಡನಪಾಳ್ಯದಲ್ಲಿ 21 ಎಕರೆ ಜಮೀನು ನುಂಗಿದ್ದಾರೆ. ನಕಲಿ ಸೃಷ್ಟಿ ಮಾಡಿ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿ ಆರೋಪಕ್ಕೆ ಕೃಷ್ಣ ಭೈರೇಗೌಡ ಸ್ಪಷ್ಟನೆ:-
ಇನ್ನು ಬಿಜೆಪಿ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಿರುವ ಕೃಷ್ಣ ಭೈರೇಗೌಡ, ಅದು ನಮ್ಮ ಪಿತ್ರಾರ್ಜಿತ ಆಸ್ತಿ. ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆ ಆಗಲಿ. ನಾನೇ ತನಿಖೆಗೆ ಸಹಕಾರ ಮಾಡುತ್ತೇನೆ. ಲೋಕಾಯುಕ್ತಕ್ಕೆ ದೂರು ಕೊಡಲಿ. ಸರ್ಕಾರವೇ ತನಿಖೆ ಮಾಡಿದರೆ ನೀವೇ ಮಂತ್ರಿ ನೀವೇ ತನಿಖೆ ಮಾಡುವುದು ಸರಿಯಾ ಎನ್ನುತ್ತೀರಾ. ಅದು ನಮ್ಮ ತಾತನವರ ಜಾಗ, ಅವರಿಂದ ನಮ್ಮ ತಂದೆಯವರಿಗೆ ಬಂದಿರುವುದು. ಆಗ ನಾನು ಐದು ವರ್ಷದ ಮಗು. ನಮ್ಮ ತಾತನಿಗೆ ಮೂರು ಜನ ಮಕ್ಕಳು. ಅವರಿಗೆ ಭಾಗ ಆಗಿ ನಮಗೆ ಬಂದಿದೆ ಎಂದು ಸ್ಪಷ್ಟಪಡಿಸಿದರು.



