HomeGadag Newsಸಮಸ್ಯೆ ಇದ್ದರೂ ಕಣ್ಮುಚ್ಚಿ ಕುಳಿತ ಶಿಕ್ಷಣ ಇಲಾಖೆ | ಸಿ.ಸಿ.ಎನ್. ಸರಕಾರಿ ಪ್ರೌಢಶಾಲೆಯಲ್ಲಿ ಮೂಲಭೂತ ಸೌಕರ್ಯಗಳೇ...

ಸಮಸ್ಯೆ ಇದ್ದರೂ ಕಣ್ಮುಚ್ಚಿ ಕುಳಿತ ಶಿಕ್ಷಣ ಇಲಾಖೆ | ಸಿ.ಸಿ.ಎನ್. ಸರಕಾರಿ ಪ್ರೌಢಶಾಲೆಯಲ್ಲಿ ಮೂಲಭೂತ ಸೌಕರ್ಯಗಳೇ ಮರೀಚಿಕೆ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ತಾಲೂಕಿನ ಮೇಗೇರಿ ಓಣಿಯಲ್ಲಿರುವ ಸಿ.ಸಿ.ಎನ್. ಸರಕಾರಿ ಪ್ರೌಢಶಾಲೆ ಇತ್ತೀಚಿನ ವರ್ಷಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಹೆಸರು ಪಡೆಯುತ್ತಿದೆ. ಆದರೆ, ಶಾಲೆಯಲ್ಲಿ ವಿದ್ಯಾರ್ಥಿ/ನಿಯರಿಗೆ ಮೂಲಭೂತ ಅಗತ್ಯತೆಗಳಲ್ಲೊಂದಾದ ಸಮರ್ಪಕ ಶೌಚಾಲಯ ವ್ಯವಸ್ಥೆ ಇಲ್ಲದೇ ಇರುವುದರಿಂದ ವಿಶಾಲವಾದ ಬಯಲೇ ವಿದ್ಯಾರ್ಥಿಗಳ ಮೂತ್ರವಿಸರ್ಜನೆಯ ಸ್ಥಳವಾಗಿದೆ.

ಸದ್ಯ ಪ್ರೌಢಶಾಲೆಯಲ್ಲಿ 8, 9 ಮತ್ತು 10ನೇ ತರಗತಿಯಲ್ಲಿ 469 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಅತ್ಯುತ್ತಮ ಸಾಧನೆಯನ್ನೂ ದಾಖಲಿಸುತ್ತಿದೆ. ಇಲ್ಲಿಗೆ ಪೋಷಕರು ತಮ್ಮ ಮಕ್ಕಳನ್ನು ಸೇರಿಸಲು ದುಂಬಾಲು ಬೀಳುತ್ತಾರೆ. ಇಂತಹ ಶಾಲೆಗೆ ಅಗತ್ಯವಿರುವ ಮೂಲಭೂತ ಸೌಲಭ್ಯವನ್ನು ಕಲ್ಪಿಸಲು ಇಲಾಖೆ ಮರೆತಂತೆ ಕಾಣುತ್ತಿದೆ.

ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಇದ್ದು, ಅದು ಕೇವಲ ಬೆರಳೆಣಿಕೆಯಷ್ಟು ಮಾತ್ರ. ಇತ್ತೀಚೆಗೆ ಪಿಂಕ್ ಶೌಚಾಲಯ ಕೆಲಸ ಪ್ರಗತಿಯಲ್ಲಿದೆ. ಆದರೆ ವಿದ್ಯಾರ್ಥಿಗಳಿಗೆ ಇದರ ಭಾಗ್ಯ ಇಲ್ಲದೇ ಇರುವುದರಿಂದ ಶಾಲೆಯ ಎದುರುಗಡೆ ಇರುವ ವಿಶಾಲವಾದ ಬಯಲಿನ ಗಿಡಗಂಟಿಗಳ ಅಂಚಿನ ಬಳಿ ತೆರಳಿ ಮೂತ್ರ ವಿಸರ್ಜನೆ ಪೂರೈಸಬೇಕಾಗಿದೆ. ಈ ಅವ್ಯವಸ್ಥೆಯನ್ನು ಸರಿಪಡಿಸುವ ಗೋಜಿಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮುಂದಾಗದೇ ಇರುವುದರಿಂದ ವಿದ್ಯಾರ್ಥಿಗಳಿಗೆ ಬಯಲು ಪ್ರದೇಶವೇ ಗತಿಯಂತಾಗಿದೆ.

ಶಾಲೆಯ ವಿದ್ಯಾರ್ಥಿಗಳಿಗೆ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಹೊರಗಡೆಯಿಂದ ಕ್ಯಾನ್‌ಗಳ ಮೂಲಕ ಶುದ್ಧ ನೀರನ್ನು ತಂದು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. 469 ವಿದ್ಯಾರ್ಥಿಗಳ ಸಂಖ್ಯೆಯನ್ನು ಹೊಂದಿರುವ ಸರಕಾರಿ ಶಾಲೆಗೆ ಅವಶ್ಯಕವಿರುವ ಶುದ್ಧ ನೀರಿನ ಘಟಕ ಇಲ್ಲಿಯವರೆಗೂ ಇಲ್ಲದೇ ಇರುವುದರಿಂದ ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಶಿಕ್ಷಕರು/ದಾನಿಗಳು ಶುದ್ಧ ಕುಡಿಯುವ ನೀರನ್ನು ತಂದು ಪೂರೈಸುತ್ತಿದ್ದಾರೆ. ಇತ್ತೀಚೆಗೆ ಬೋರ್‌ವೆಲ್ ರಿಪೇರಿಯಾಗಿದೆ ಎಂದು ಹೇಳುತ್ತಿದ್ದರೂ, ಬೋರ್‌ವೆಲ್ ನೀರು ವಿದ್ಯಾರ್ಥಿಗಳಿಗೆ ಕುಡಿಯಲು ಯೋಗ್ಯವೇ ಎಂದು ಸಂಬಂಧಿಸಿದ ಅಧಿಕಾರಿಗಳೇ ಉತ್ತರಿಸಬೇಕಿದೆ.

ವಿಶಾಲವಾದ ಸ್ಥಳವನ್ನು ಹೊಂದಿರುವ ಈ ಶಾಲೆಗೆ ಸಮರ್ಪಕ ಆಟದ ಮೈದಾನವಿಲ್ಲ, ವಿದ್ಯಾರ್ಥಿನಿಯರು ಶೌಚಾಲಯಕ್ಕೆ ತೆರಳಲು ಸಮರ್ಪಕ ರಸ್ತೆ ಇಲ್ಲ, ಎಲ್ಲೆಂದರಲ್ಲಿ ಗಿಡ-ಗಂಟಿಗಳು ಬೆಳೆದಿದ್ದು, ಶಾಲೆಗೆ ಅವಶ್ಯಕವಿರುವ ಗೇಟ್ ವ್ಯವಸ್ಥೆ ಹಾಗೂ ಕಂಪೌಂಡ್ ವ್ಯವಸ್ಥೆ ಇಲ್ಲದೇ ಅವ್ಯವಸ್ಥೆಗಳ ಯಾದಿಯೇ ದೊಡ್ಡದಾಗುತ್ತಿದೆ.

ಇತ್ತೀಚಿನ ವರ್ಷಗಳಲ್ಲಿ ಖಾಸಗಿ ಶಾಲೆಗಳ ಭರಾಟೆಯಲ್ಲಿ ಸರಕಾರಿ ಶಾಲೆಗಳು ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿವೆ. ಇಂತಹ ಸಂದರ್ಭದಲ್ಲಿ ಇಂತಹ ಸರಕಾರಿ ಶಾಲೆಗಳನ್ನು ಉಳಿಸಿ ಮುನ್ನಡೆಸುವದು ಶಿಕ್ಷಣ ಇಲಾಖೆಯ ಅಧಿಕಾರಿಗಳ ಜವಾಬ್ದಾರಿ. ಈ ಶಾಲೆಯ ವಿದ್ಯಾರ್ಥಿಗಳು ಬಯಲು ಮೂತ್ರವಿಸರ್ಜನೆ ಮಾಡುತ್ತಿರುವುದು ಶಿಕ್ಷಣ ಇಲಾಖೆಯ ಅಧಿಕಾರಿಗಳ ಗಮನಕ್ಕಿಲ್ಲವೇ, ಸಮರ್ಪಕ ನೀರು ಪೂರೈಕೆಗೆ ಯಾಕೆ ಕ್ರಮ ವಹಿಸಿಲ್ಲ ಎಂಬುದಕ್ಕೆ ಸಂಬಂಧಿಸಿದ ಅಧಿಕಾರಿಗಳೇ ಉತ್ತರಿಸಬೇಕಿದೆ.

ಈ ಕುರಿತು ಪ್ರತಿಕ್ರಿಯಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್. ನಾಣಕೀನಾಯ್ಕ, ಪಿಂಕ್ ಶೌಚಾಲಯ ಸ್ಲ್ಯಾಬ್ ಹಂತದಲ್ಲಿದೆ, ಕುಡಿಯುವ ನೀರಿನ ಟ್ಯಾಪ್ ಸಂಪರ್ಕಕ್ಕಾಗಿ ಪಟ್ಟಣ ಪಂಚಾಯಿತಿಗೆ ಮುಖ್ಯೋಪಾಧ್ಯಾಯರು ಹಲವು ಬಾರಿ ಪತ್ರ ಬರೆದರೂ ಸ್ಪಂದಿಸಿಲ್ಲ ಎಂದರು.

ಎಸ್‌ಡಿಎಂಸಿ ಅಧ್ಯಕ್ಷ ರಾಮಣ್ಣ ಕಂಬಳಿ ಈ ಕುರಿತು ಪ್ರತಿಕ್ರಿಯಿಸಿ, ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ಲಭಿಸುತ್ತಿರುವುದರಿಂದ ಹೆಚ್ಚಿನ ವಿದ್ಯಾರ್ಥಿಗಳು ದಾಖಲಾಗುತ್ತಿದ್ದಾರೆ. ಶಿಕ್ಷಣ ಇಲಾಖೆಯ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಸಮರ್ಪಕ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ಗೇಟ್ ಮತ್ತು ಕಂಪೌಂಡ್ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಹೇಳಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!