ನಟ ಪ್ರಭಾಸ್ ಅಭಿನಯದ ‘ದಿ ರಾಜಾ ಸಾಬ್’ ಸಿನಿಮಾದ ‘ಸಹನಾ ಸಹನಾ..’ ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ನಟಿ ನಿಧಿ ಅಗರ್ವಾಲ್ ಅವರಿಗೆ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. ಖಾಸಗಿ ಮಾಲ್ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಜನಸಂದಣಿ ನಿಯಂತ್ರಣ ತಪ್ಪಿದ್ದು, ಇದರ ಪರಿಣಾಮವಾಗಿ ನಟಿಗೆ ಅಸಹನೀಯ ಪರಿಸ್ಥಿತಿ ಎದುರಾಗಿದೆ.
ಹಾಡು ಬಿಡುಗಡೆ ಕಾರ್ಯಕ್ರಮಕ್ಕೆ ಹರ್ಷದಿಂದ ಆಗಮಿಸಿದ್ದ ನಿಧಿ ಅಗರ್ವಾಲ್, ಅಭಿಮಾನಿಗಳಿಂದ ಸುತ್ತುವರಿಯಲ್ಪಟ್ಟರು. ಫೋಟೋ ತೆಗೆದುಕೊಳ್ಳುವ ನೆಪದಲ್ಲಿ ಕೆಲವರು ಅವರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ಬಾಡಿಗಾರ್ಡ್ಗಳು ಮಧ್ಯಪ್ರವೇಶಿಸಿ ನಟಿಯನ್ನು ಜನಸಂದಣಿಯಿಂದ ಹೊರತಂದು ಕಾರಿನಲ್ಲಿ ಕೂರಿಸಿದರು.
ನಿಧಿ ಅಗರ್ವಾಲ್ ಅವರನ್ನು ಮುತ್ತಿಗೆ ಹಾಕಿಕೊಂಡಿರುವ ದೃಶ್ಯಗಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕಾರಿನೊಳಗೆ ಕುಳಿತ ಬಳಿಕ ಅವರು ತೀವ್ರ ಕೋಪ ಹಾಗೂ ಬೇಸರ ವ್ಯಕ್ತಪಡಿಸಿರುವುದು ಕಾಣಿಸುತ್ತದೆ. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಕಾರ್ಯಕ್ರಮಕ್ಕೆ ಅಗತ್ಯವಿರುವ ಅನುಮತಿ ಪಡೆಯದೇ ಆಯೋಜನೆ ಮಾಡಲಾಗಿದ್ದು, ಈ ಹಿನ್ನೆಲೆಯಲ್ಲಿ ಆಯೋಜಕರ ವಿರುದ್ಧವೂ ಕೇಸ್ ದಾಖಲಾಗಿದೆ. ನಿಗದಿತ ಸಮಯಕ್ಕಿಂತ ಹಲವು ಗಂಟೆಗಳ ತಡವಾಗಿ ಸಾಂಗ್ ರಿಲೀಸ್ ನಡೆದಿದ್ದು, ಆ ವೇಳೆಗೆ ಅಪಾರ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದೇ ಗೊಂದಲಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಘಟನೆಯ ಕುರಿತು ನಿಧಿ ಅಗರ್ವಾಲ್ ಇನ್ನೂ ಪ್ರತಿಕ್ರಿಯೆ ನೀಡದಿದ್ದರೂ, ಸಾಮಾಜಿಕ ಜಾಲತಾಣಗಳಲ್ಲಿ ನಟಿಗೆ ಬೆಂಬಲ ಮತ್ತು ಘಟನೆಗೆ ಖಂಡನೆ ವ್ಯಕ್ತವಾಗುತ್ತಿದೆ.



