‘ಧುರಂಧರ್’ ಸಿನಿಮಾದಲ್ಲಿ ರಣವೀರ್ ಸಿಂಗ್ ಭಾರತೀಯ ಗುಪ್ತಚರ ಸೈನಿಕನಾಗಿ ಕಾಣಿಸಿಕೊಂಡಿದ್ದಾರೆ. ಪಾಕಿಸ್ತಾನದ ಉಗ್ರ ಸಂಘಟನೆಗಳೊಳಗೆ ನುಸುಳಿ, ಅವರ ಮಧ್ಯೆಯೇ ಬೆರೆತು ಭಯ ಹುಟ್ಟಿಸುವ ಸ್ಪೈ ಕಥೆಯನ್ನು ಸಿನಿಮಾ ಒಳಗೊಂಡಿದೆ. ಪಾಕಿಸ್ತಾನ ಮಾಡಿದ ಭಯೋತ್ಪಾದನಾ ಕೃತ್ಯಗಳನ್ನು ನೇರವಾಗಿ ತೋರಿಸಿರುವ ಕಾರಣ ಈ ಚಿತ್ರವನ್ನು ಪಾಕಿಸ್ತಾನದಲ್ಲಿ ಅಧಿಕೃತವಾಗಿ ನಿಷೇಧಿಸಲಾಗಿದೆ. ಆದರೂ ಬ್ಯಾನ್ ನಡುವೆಯೇ ಸಿನಿಮಾ ಆ ದೇಶದಲ್ಲಿ ಭಾರೀ ವೀಕ್ಷಣೆ ಕಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.
ಭಾರತದಲ್ಲಿ ಪಾಕಿಸ್ತಾನಿ ಸಿನಿಮಾಗಳು ಮತ್ತು ಪಾಕಿಸ್ತಾನದಲ್ಲಿ ಭಾರತೀಯ ಸಿನಿಮಾಗಳು ಥಿಯೇಟರ್‌ಗಳಲ್ಲಿ ಪ್ರದರ್ಶನ ಕಾಣದ ಸ್ಥಿತಿ ಇದೆ. ಒಂದು ಕಾಲದಲ್ಲಿ ಹಿಂದಿ ಚಿತ್ರಗಳಿಗೆ ದೊಡ್ಡ ಮಾರುಕಟ್ಟೆಯಾಗಿದ್ದ ಪಾಕಿಸ್ತಾನ, ರಾಜಕೀಯ ವೈಮನಸ್ಸಿನ ಕಾರಣದಿಂದ ಈಗ ಭಾರತೀಯ ಸಿನಿಮಾಗಳಿಗೆ ತೆರೆ ಮುಚ್ಚಿದೆ. ಆದರೂ ‘ಧುರಂಧರ್’ ಸಿನಿಮಾದ ಹೈಪ್ ತಡೆಯಲಾಗದೆ, ಪಾಕ್ ಪ್ರೇಕ್ಷಕರು ಪೈರಸಿ ಮಾರ್ಗಗಳ ಮೂಲಕ ಚಿತ್ರವನ್ನು ವೀಕ್ಷಿಸಿದ್ದಾರೆ.
1999ರ ಖಂದಹಾರ್ ವಿಮಾನ ಅಪಹರಣ, 26/11ರ ಮುಂಬೈ ಉಗ್ರ ದಾಳಿ ಸೇರಿದಂತೆ ಹಲವು ನೈಜ ಘಟನೆಗಳನ್ನು ಸಿನಿಮಾದಲ್ಲಿ ಒಳಗೊಂಡಿದೆ. ವರದಿಗಳ ಪ್ರಕಾರ, ಬಿಡುಗಡೆಯಾದ ಕೇವಲ ಎರಡು ವಾರಗಳಲ್ಲಿ ಪಾಕಿಸ್ತಾನದಲ್ಲಿ ಸುಮಾರು 20 ಲಕ್ಷ ಬಾರಿ ಸಿನಿಮಾ ಅಕ್ರಮವಾಗಿ ಡೌನ್‌ಲೋಡ್ ಆಗಿದೆ. ಅಂದರೆ ಕನಿಷ್ಠ 20 ಲಕ್ಷ ಮಂದಿ ಪಾಕ್ ಪ್ರೇಕ್ಷಕರು ಚಿತ್ರ ವೀಕ್ಷಿಸಿರುವುದು ಸ್ಪಷ್ಟವಾಗಿದ್ದು, ಇದು ಮುಂದಿನ ದಿನಗಳಲ್ಲಿ ಪಾಕಿಸ್ತಾನದಲ್ಲಿ ಅತಿ ಹೆಚ್ಚು ಪೈರಸಿ ಡೌನ್‌ಲೋಡ್ ಕಂಡ ಸಿನಿಮಾ ಎಂಬ ದಾಖಲೆ ಬರೆಯುವ ಸಾಧ್ಯತೆ ಇದೆ.
ಪಾಕಿಸ್ತಾನವನ್ನು ಉಗ್ರ ರಾಷ್ಟ್ರವೆಂದು ಸಿನಿಮಾದಲ್ಲಿ ಸ್ಪಷ್ಟವಾಗಿ ತೋರಿಸಲಾಗಿದೆ ಎಂದು ನಿರ್ದೇಶಕ ಆದಿತ್ಯ ಧಾರ್ ಹೇಳಿದ್ದಾರೆ. ಪಾಕಿಸ್ತಾನದಲ್ಲಿ ಥಿಯೇಟರ್ ಬಿಡುಗಡೆ ಆಗದ ಕಾರಣ ನಿರ್ಮಾಪಕರಿಗೆ 50–60 ಕೋಟಿ ರೂಪಾಯಿ ನಷ್ಟವಾಗಿರಬಹುದು. ಆದರೆ, ತಲುಪಿಸಬೇಕಿದ್ದ ಸಂದೇಶ ಪಾಕಿಸ್ತಾನದ ಜನರ ತನಕ ತಲುಪಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಬಾಕ್ಸ್ ಆಫೀಸ್‌ನಲ್ಲಿ ‘ಧುರಂಧರ್’ ಈಗಾಗಲೇ 460 ಕೋಟಿ ರೂಪಾಯಿ ಗಳಿಕೆ ಕಂಡಿದ್ದು, ಶನಿವಾರದ ವೇಳೆಗೆ 500 ಕೋಟಿ ಗಡಿ ತಲುಪುವ ನಿರೀಕ್ಷೆ ಇದೆ. ಈ ವರ್ಷದ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎಂಬ ಹೆಗ್ಗಳಿಕೆ ಪಡೆಯುವ ಸಾಧ್ಯತೆ ಇದೆ.



