ಕಲಬುರಗಿ: ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಉಡಚಣ ಗ್ರಾಮದ ಶಂಕರಲಿಂಗೇಶ್ವರ ಸಂಸ್ಥಾನದ ಹಿರೇಮಠದ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಗಾಳಿಯಲ್ಲಿ ಗುಂಡು ಹಾರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕೆಲ ತಿಂಗಳುಗಳ ಹಿಂದೆ ಮಠದಿಂದ ದೂರವಾಗಿದ್ದ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಇತ್ತೀಚೆಗೆ ಮತ್ತೆ ಗ್ರಾಮಕ್ಕೆ ವಾಪಸ್ಸಾಗಿದ್ದರು. ಕುಡಿದು ರಂಪಾಟ ನಡೆಸಿದ್ದ ಆರೋಪದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಸ್ವಾಮೀಜಿಯನ್ನು ಮಠದಿಂದ ಹೊರಗೆ ಹಾಕಿದ್ದರು ಎನ್ನಲಾಗಿದೆ.
ಮಠಕ್ಕೆ ಹೊಸ ಪೀಠಾಧಿಪತಿಯನ್ನು ನೇಮಕ ಮಾಡುವ ಕುರಿತು ಚರ್ಚೆಗಳು ನಡೆಯುತ್ತಿರುವ ಮಧ್ಯೆ ಸ್ವಾಮೀಜಿ ವಾಪಸ್ಸಾಗಿದ್ದು, ಇನ್ನು ಈ ವೇಳೆ ಮಠದ ಆವರಣದಲ್ಲಿ ನಿಂತು ಗಾಳಿಯಲ್ಲಿ ಗುಂಡು ಹಾರಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ವಿರೋಧಿಗಳನ್ನು ಭಯಪಡಿಸುವ ಉದ್ದೇಶದಿಂದ ಈ ಕೃತ್ಯ ನಡೆಸಲಾಗಿದೆಯೇ ಎಂಬ ಪ್ರಶ್ನೆಗಳು ಉದ್ಭವಿಸಿವೆ. ಘಟನೆಗೆ ಸಂಬಂಧಿಸಿದಂತೆ ಸ್ಥಳೀಯರು ಹಾಗೂ ಅಧಿಕಾರಿಗಳಿಂದ ಇನ್ನೂ ಅಧಿಕೃತ ಸ್ಪಷ್ಟನೆ ಲಭ್ಯವಾಗಿಲ್ಲ. ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುವ ಸಾಧ್ಯತೆ ಇದೆ.



