ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ದೇಶವನ್ನು ಪೋಲಿಯೋ ಮುಕ್ತವಾಗಿಸುವ ಉದ್ದೇಶದಿಂದ ಸರ್ಕಾರದ ವತಿಯಿಂದ ಆಯೋಜಿಸಿದ್ದ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನ ತಾಲೂಕಿನಾದ್ಯಂತ ಯಶಸ್ವಿಯಾಗಿ ನಡೆಯಿತು.
ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಕಾರ್ಯವನ್ನು ಸರ್ಕಾರಿ ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಅಂಗನವಾಡಿಗಳು ಹಾಗೂ ಬೂತ್ ಕೇಂದ್ರಗಳಲ್ಲಿ ನಡೆಸಲಾಯಿತು.
ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆದ ಈ ಅಭಿಯಾನಕ್ಕೆ ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಸಹಕಾರ ನೀಡಿದರು. ಕೊಡಗಾನೂರ ಗ್ರಾಮದ ಅಂಗನವಾಡಿ ಲಸಿಕಾ ಬೂತ್ನಲ್ಲಿ ಲಸಿಕೆ ಅಭಿಯಾನದಲ್ಲಿ ಪಾಲ್ಗೊಂಡಿದ್ದ ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ ರೇಖಾ ಕಳ್ಳಿಮಠ ಮಾತನಾಡಿ, ಪೋಲಿಯೋ ರೋಗವನ್ನು ಸಂಪೂರ್ಣ ನಿರ್ಮೂಲನೆ ಮಾಡಲು ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳಿಗೆ ಲಸಿಕೆ ಹಾಕಿಸಲು ಮುಂದಾಗಬೇಕು. ಈ ಲಸಿಕೆ ಸುರಕ್ಷಿತವಾಗಿದ್ದು, ಯಾವುದೇ ಅಡ್ಡ ಪರಿಣಾಮಗಳಿಲ್ಲ ಎಂದು ಹೇಳಿದರು.



